ದೂರವಾಣಿ
ಶಬ್ದದ ಅಲೆಗಳನ್ನು ವಿದ್ಯುತ್ತರಂಗಗಳನ್ನಾಗಿ ಮಾರ್ಪಡಿಸುವ ಪ್ರೇಷಕ, ಟ್ರಾನ್ಸ್‍ಮೀಟರ್, ವಿದ್ಯುತ್ತರಂಗಗಳನ್ನು ಶಬ್ದದ ಅಲೆಗಳಾಗಿ ಮಾರ್ಪಡಿಸುವ ಅಭಿಗ್ರಾಹಕ (ರಿಸೀವರ್) ಮತ್ತು ತತ್ಸಂಭಧೀ ಬಲೆಗೆಲಸ-ಈ ವ್ಯವಸ್ಥೆಯ ಒಟ್ಟು ಹೆಸರು (ಟೆಲಿಪೋನ್).  ವಾಸ್ತವವಾಗಿ ಒಂದು ನೆಲೆಯಲ್ಲಿ ಪ್ರೇಷಕಕ್ಕೆ ಆಡಿದ ಮಾತು ದೂರದ ನಿಶ್ಚಲ ನೆಲೆಯೊಂದರ ಅಭಿಗ್ರಾಹಕದಲ್ಲಿ, ಆ ಕ್ಷಣದಲ್ಲಿಯೇ ಮಾತಾಗಿ ಕೇಳುವಂತೆ ಏರ್ಪಡಿಸುವ ಸಮಗ್ರ ಉಪಕರಣ ವ್ಯವಸ್ಥೆಗೆ ಈ ಹೆಸರುಂಟು.  ಇದರ ವೈದ್ಯುತ ಘಟಕಗಳನ್ನು ದೂರವಾಣಿ ಸಲಕರಣೆಯ ಬಲೆಗೆಲಸಕ್ಕೆ ಒಂದು ರಜ್ಜು ಸಂಯೋಜಿಸುವುದು.

ಪ್ರಸ್ತಕ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ವಿಸ್ತರಿಸಿದೆ :
     1  ಇತಿಹಾಸ
     2  ತಾಂತ್ರಿಕ ಅಭಿವೃದ್ಧಿ
     3  ದೂರವಾಣಿ ಉಪಕರಣ
     4  ಸ್ವಿಚ್ ಹಲಗೆ
     5  ಸ್ವಯಂಚಾಲಿತ ವಿನಿಮಯ ವ್ಯವಸ್ಥೆ
     6  ಕ್ರಾಸ್‍ಬಾರ್ ವಿನಿಮಯ ಕೇಂದ್ರ
     7  ದೂರವಾಣಿ ಮಾರ್ಗಗಳು
     8  ಸುದೂರ ಪ್ರೇಷಣ
     9  ವಾಹಕ ದೂರವಾಣಿ
     10  ಭಾರತದಲ್ಲಿ ದೂರವಾಣಿ
     11  ಅಂಕಿ ಅಂಶಗಳು

ಇತಿಹಾಸ :  ದೂರವಾಣಿ ಉಪಜ್ಞೆಗೆ (ಇನ್‍ವೆನ್ಷನ್) ಕಾರಣ ಪುರುಷರಾದವರ ಪೈಕಿ ಮುಖ್ಯನಾದವ ಅಲೆಗ್ಸಾಂಡರ್ ಗ್ರಹಾಮ್ ಬೆಲ್ (1847-1922) ಎಂಬ ಅಮೆರಿಕದ ವಿಜ್ಞಾನಿ.  ಈತ 1876ರಲ್ಲಿ ದೂರವಾಣಿಯನ್ನು ಉಪಜ್ಜಿಸಿ  ಅದರ ಏಕಸ್ವವನ್ನು (ಪೇಟೆಂಟ್) ಪಡೆದ.  ಇವನಿಗಿಂತ ಮೊದಲು 1854ರಲ್ಲೇ ಚಾರಲ್ಸ್ ಬೌರ್‍ಸೀಲ್ ಎಂಬ ಫ್ರೆಂಚ್ ಸಂಶೋದಕ ಒಂದು ಲೇಖನದಲ್ಲಿ ಮನುಷ್ಯವಾಣಿಯನ್ನು ವಿದ್ಯುತ್ ಅಲೆಗಳ ಮೂಲಕ ರವಾನಿಸುವ ಬಗೆಯನ್ನು ಬರೆದಿದ್ದ.  ಅದರ ಪ್ರಕಾರ ದೂರಲೇಖನ (ಟೆಲಿಗ್ರಾಫ್) ತಂತಿಯ ಒಂದು ತುದಿಯನ್ನು ಸ್ಪರ್ಶಿಸುವಂತೆ ತೆಳು ಪೊರೆಯನ್ನು ಜೋಡಿಸಿ, ಅದಕ್ಕೆ ಸತತವಾಗಿ ಶಬ್ದದ ಅಲೆಗಳು ಬಡಿಯುವಂತೆ ಏರ್ಪಡಿಸಿದರೆ ಅದರ ಕಂಪನದಿಂದ ದೂರ ಲೇಖನ ತಂತಿಯ ವಿದ್ಯುನ್ಮಂಡಲದಲ್ಲಿ ಪ್ರವಾಹದ ಏರಿಳಿತಗಳು ಉಂಟಾಗುವುವು.  ಇವು ಶಬ್ದ ಅಲೆಗಳ ಆವರ್ತಾಂಕವನ್ನು (ಫ್ರೀಕ್ವೆನ್ಸಿ) ಅನುಸರಿಸಿ ಇವೆ.  ತಂತಿಯ ಇನ್ನೊಂದು ತುದಿಗೆ ವಿದ್ಯುತ್ಕಾಂತವನ್ನೂ ಅದಕ್ಕೆ ಹೊಂದಿಕೊಂಡಂತೆ ಇನ್ನೊಂದು ಪೊರೆಯನ್ನೂ ಜೋಡಿಸಿದಲ್ಲಿ ಎರಡನೆಯದು ಸಹ ವಿದ್ಯುತ್ಕಾಂತದ ಸೆಳೆತದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಕಂಪಿಸಿ ಮೊದಲಿನ ಶಬ್ದವನ್ನೇ ಉತ್ಪತ್ತಿ ಮಾಡುತ್ತದೆ.  ದೂರವಾಣಿಯ ಕಲ್ಪನೆಯನ್ನು ಮೇಲೆ ವಿವರಿಸಿದಂತೆ ಬೌರ್‍ಸೀಲ್ ಸಾರತಃ ವಿವರಿಸಿದ್ದನೇ ವಿನಾ ಅವನು ಅದನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿರಲಿಲ್ಲ.  ಕೆಲವು ವರ್ಷಗಳ ಬಳಿಕ ಫಿಲಿಪ್ ರೀಸ್ ಎಂಬ ಜರ್ಮನ್ ಸಂಶೋಧಕನೂ ಇದೇ ಆಧಾರದ ಮೇಲೆ ಕಾರ್ಯವನ್ನೂ ಮುಂದುವರಿಸಿ ಒಂದು ಸಾಧನವನ್ನು ತಯಾರಿಸಿ ಅದನ್ನು ದೂರವಾಣಿ ಎಂದು ಕರೆದ.  ಆದರೆ ಅದರ ಮೂಲಕ ಅವನು ಸತತವಾದ ಸಂಗೀತ ಸ್ವರಗಳನ್ನು ಕಳುಹಿಸುವುದರಲ್ಲಿ ಯಶಸ್ವಿಯಾದನೇ ಹೊರತು ಮನುಷ್ಯವಾಣಿಯನ್ನು ಅಲ್ಲ.  

ಗ್ರಹಾಮ್ ಬೆಲ್ ದೂರವಾಣಿಯನ್ನು ಪತ್ತೆ ಮಾಡಿದ್ದು ಒಂದು ಆಕಸ್ಮಿಕ.  ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಆತ ಬೆಳಗಿನ ಹೊತ್ತು ಮೂಕ ಮತ್ತು ಕಿವುಡರಿಗೆ ಕಣ್ಸನ್ನೆಗಳಿಂದ ಮಾತು ಕಲಿಸುವ ವಿಧಾನಗಳನ್ನು ಬೋಧಿಸುತ್ತಿದ್ದ ಮತ್ತು ರಾತ್ರಿ ವೇಳೆ ಸಂಗತ ದೂರಲೇಖನದ (ಹಾರ್ಮಾನಿಕ್ ಟೆಲಿಗ್ರಫಿ) ವಿಷಯವಾಗಿ ಸಂಶೋಧನೆಗಳನ್ನು ಮಾಡುತ್ತಿದ್ದ.  ಒಂದೇ ದೂರಲೇಖದ ತಂತಿಯ ಮೂಲಕ ಹಲವಾರು ಜೊತೆ ಸ್ಪ್ರಿಂಗ್‍ಗಳ ನೆರವಿನಿಂದ ಏಕ ಕಾಲದಲ್ಲಿ ಅನೇಕ ತಂತಿವಾರ್ತೆಗಳನ್ನು ರವಾನಿಸುವುದು ಸಾಧ್ಯವೆಂದು ಅವನು ನಂಬಿದ್ದ.  ಸಂಗತ ದೂರಲೇಖನವನ್ನು ಪರಿಷ್ಕರಿಸುವುದರಲ್ಲಿ ಆತ ಜಯಗಳಿಸಲಿಲ್ಲ.  ಆದರೆ ಆ ಪ್ರಯೋಜನಗಳು ದೂರವಾಣಿಯನ್ನು ಉಪಜ್ಞಿಸಲು ಅನುಮಾಡಿಕೊಟ್ಟವು.  ಪ್ರಯೊಗಗಳನ್ನು ಬೆಲ್ ಮತ್ತು ಅವನ ಸಹಾಯಕ ತಾಮಸ್ ವಾಟ್ಸನ್ ನಡೆಸುತ್ತಿದ್ದರು.  ಅವರು ಬಳಸುತ್ತಿದ್ದ ಸಲಕರಣೆಗಳ ರಚನೆ ಸುಮಾರಾಗಿ ಹೀಗಿತ್ತು.  ತಂತಿವಾರ್ತೆಯ ಪ್ರೇಷಣ ಕೊನೆಯಲ್ಲಿ ಪ್ರೇಷಕಕ್ಕೆ ಸೇರಿದಂತೆ ಒಂದು ಸ್ಪ್ರಿಂಗ್ ಜೋಡಿಸಿದ್ದು ದೂರಲೇಖನ ಗುಂಡಿಯನ್ನು (ಕೀ) ಒತ್ತಿದ ಕೂಡಲೇ ಪ್ರೇಷಕದ ಕಾಂತ ಈ ಸ್ಪ್ರಿಂಗನ್ನು ಆಕರ್ಷಿಸುತ್ತದೆ.  ಕಾಂತಕ್ಕೆ ಸ್ಪ್ರಿಂಗ್ ತಗುಲಿದ ಕೂಡಲೇ ವಿದ್ಯುನ್ಮಂಡಲ ಪೂರ್ತಿಯಾಗುತ್ತಿತ್ತು.  ಮತ್ತೆ ಕಾಂತ ಶಕ್ತಿಯುತವಾಗುತ್ತಿದ್ದುದರಿಂದ ಸ್ಪ್ರಿಂಗ್ ಸೆಳೆಯಲ್ಪಡುತ್ತಿತ್ತು.  ಇದೇ ರೀತಿ ಪದೇ ಪದೇ ಆಗುತ್ತಿದ್ದುದರಿಂದ ಸ್ಪ್ರಿಂಗ್ ಕಂಪಿಸಲು ಪ್ರಾರಂಭಿಸಿತು.  ಇದರಿಂದ ವಿದ್ಯುನ್ಮಂಡಲದಲ್ಲಿಯೂ ಪ್ರವಾಹ ಏರಿಳಿತಗಳಾಗಿ ಅದು ಸ್ಪ್ರಿಂಗ್ ಕಂಪನಕ್ಕೆ ಅನುಗುಣವಾಗಿ ಇರುತ್ತಿತ್ತು.  ಈ ವ್ಯತ್ಯಾಸದಿಂದ ದೂರಲೇಖನ ಮಂಡಲದಲ್ಲಿದ್ದ ಅಭಿಗ್ರಾಹಕ ಕೊನೆಯ ಸ್ಪ್ರಿಂಗ್ ಸಹ ಕಂಪಿಸುತ್ತಿತ್ತು.  ಈ ಕಂಪನಗಳು ಪ್ರೇಷಕ ಕೊನೆಯ ಸ್ಪ್ರಿಂಗ್ ರೀತಿಯೇ ಇದ್ದುವು.  ಬೆಲ್ ಮತ್ತು ವಾಟ್ಸನ್ ಎಂದಿನಂತೆ ಒಂದು ದಿನ ತಮ್ಮ ಪ್ರಯೋಗವನ್ನು ಮಾಡುತ್ತಿದ್ದರು.  ಆಗ ಆಕಸ್ಮಾತ್ತಾಗಿ ಒಂದಿಷ್ಟು ಆಮ್ಲ ಬೆಲ್‍ನ ಸುರಾಲಿನ ಮೇಲೆ ಚೆಲ್ಲಿಹೋಯಿತು.  ಮೇಲು ಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ವಾಟ್ಸನ್ನನನ್ನು ನೆರವಿಗೆ ಬರಬೇಕೆಂಬುದಾಗಿ ಬೆಲ್ ಕೂಗಿ ಕರೆದ.  ಪಕ್ಕದಲ್ಲಿದ್ದ ಉಪಕರಣದ ಮೂಲಕ ಈ ಮನುಷ್ಯಸ್ವರ ಹೊರಟದ್ದನ್ನು ಕೇಳಿ ಹರ್ಷ ಪುಳಕಿತನಾಗಿ ವಾಟ್ಸನ್ ಒಡನೆ ಕೆಳಗಡೆಗೆ ಧಾವಿಸಿ ಬಂದ.  ಇದೇ ಪ್ರಪಂಚದ ಪ್ರಥಮ ದೂರವಾಣಿ ಸಂಪರ್ಕ (2-6-1875).

ಮೇಲಿನ ಪ್ರಯೋಗಗಳನ್ನು ಮುಂದುವರಿಸಿದಾಗ ಮಂಡಲದಲ್ಲಿನ ಪ್ರವಾಹದಲ್ಲಿ ಆಗುತ್ತಿದ್ದ ವ್ಯತ್ಯಾಸ ಬೆಲ್‍ನ ಗಮನ ಸೆಳೆಯಿತು.  ಅದು ಸ್ಪ್ರಿಂಗ್ ಮತ್ತು ಕಾಂತದ ಮಧ್ಯೆ ಇದ್ದ ವಾಯುಸಾದ್ರಂತೆಗೆ ಅನುಗುಣವಾಗಿರುತ್ತಿತ್ತು.  

ಚಿತ್ರ-2

ಬೆಲ್ ಇದರ ಮಹತ್ತ್ವವನ್ನು ಅರಿತೊಡನೆಯೇ ತನ್ನ ಕಾರ್ಯವನ್ನು ಮುಂದುವರಿಸಿ, ಸ್ಪ್ರಿಂಗಿಗೆ ಬದಲಾಗಿ ತೆಳುವಾದ ಪೊರೆಯನ್ನು ಅಲ್ಲಿ ಜೋಡಿಸಿದ. ಮುಂದಿನ ಪ್ರಯೋಗಗಳಿಂದ ಆ ಪೊರೆ ಮನುಷ್ಯವಾಣಿಯಿಂದ ಬರುವ ವಾಯಸಂಮರ್ದದ ಏರಿಳಿತಗಳನ್ನು ಅನುಸರಿಸಿ ಕಂಪಿಸುತ್ತಿದ್ದುದನ್ನು ಶೋಧಿಸಿದ.  ಅನೇಕ ಬಗೆಯ ಪೊರೆಗಳನ್ನು ಉಪಯೋಗಿಸಿ ನೋಡಿ ಬೆಲ್ ಒಂದು ಪ್ರೇಷಕ ಮತ್ತು ಒಂದು ಅಭಿಗ್ರಾಕವನ್ನು ತಯಾರಿಸಿದ.  ಮರುವರ್ಷ (1876) ಅದೇ ರಚನೆಯನ್ನು ಅನುಸರಿಸಿ ವಿದ್ಯುತ್ ಅಲೆಗಳ ಮೂಲಕ ಮನುಷ್ಯವಾಣಿಯನ್ನು ದೂರಕ್ಕೆ ಕಳುಹಿಸುವ ಸಾಧನವನ್ನು ತಯಾರಿಸಿ ಅದರ ಏಕಸ್ವಕ್ಕಾಗಿ ಅರ್ಜಿಸಲ್ಲಿಸಿದ.  ಆ ಸಾಧನದಲ್ಲಿ ಮೂಲತಃ ಸಂಗತ ದೂರಲೇಖನದಲ್ಲಿದ್ದ ವ್ಯವಸ್ಥೆಯನ್ನು ಹೊಂದಿ ಮನುಷ್ಯವಾಣಿಯನ್ನು ಪ್ರೇಷಿಸಲು ಬೇಕಾದ ಮಾರ್ಪಡಿಕೆಗಳು ಇದ್ದವು.

ಬೆಲ್ ತಯಾರಿಸಿದ ಏಕಸ್ವಕ್ಕೆ ಒಪ್ಪಿಸಿದ ದೂರವಾಣಿ ಉಪಕರಣದ ಮೂಲತತ್ತ್ವವನ್ನು  ಚಿತ್ರ (2)ರಲ್ಲಿ ಕಾಣಬಹುದು.  ಇದರಲ್ಲಿ ಪ್ರೇಷಕ ಮತ್ತು ಅಭಿಗ್ರಾಹಕಗಳ ರಚನೆ ಒಂದೇ ಆಗಿವೆ. ಎರಡರಲ್ಲೂ ಮುಖ್ಯವಾಗಿ ಒಂದು ಮೆದು ಕಬ್ಬಿಣದ ತಿರುಳಿನ (ಕೋರ್) ವಿದ್ಯುತ್ಕಾಂತವಿದ್ದು ಅದಕ್ಕೆ ಒಂದು ನೊಗವನ್ನು ಲಗತ್ತಿಸಿದೆ.  ಮೊಗದ ಬಿಡುತುದಿಗೆ ತಿರುಗಣಿಗೂಟದ  ಮೂಲಕ ಒಂದು ಆರ್ಮೆಚರನ್ನು ಜೋಡಿಸಿದೆ.  ಇದನ್ನು ಚಿತ್ರದಲ್ಲಿ ತೋತಿಸುವಂತೆ ಲಾಳಿಕೆ ರೂಪದ ಕೊಳವೆಯ ತುದಿಗೆ ಬಿಗಿದ ತೆಳುವಾದ ಪೊರೆಯ ಮಧ್ಯಕ್ಕೆ ಸೇರಿಸಿದೆ.  ಇಂಥ ಎರಡು ಸಾಧನಗಳನ್ನು ಒಂದು ಜೊತೆ ತಂತಿಗಳ ಮೂಲಕ ಒಂದು ವಿದ್ಯುತ್ಕೋಶಕ್ಕೆ ಕೂಡಿಸಿದೆ.  ಉಪಕರಣ ಕ್ರಿಯೋನ್ಮುಖವಾಗಿಲ್ಲದಿದ್ದಾಗ ಅದರ ವಿದ್ಯುನ್ಮಂಡಲದಲ್ಲಿ ನೇರ ಪ್ರವಾಹವಿದ್ದು ವಿದ್ಯುತ್ಕಾಂತದ ಸೆಳೆತದಿಂದ ಆರ್ಮೆಚರ್ ಮೇಲೆಯೂ ಅದರಿಂದ ಪೊರೆಯ ಮೇಲೆಯೂ ಸೆಳೆತವಿರುತ್ತದೆ.  ಮುಖಿಕಾದ (ಮೌತ್ ಪೀಸ್) ಕಡೆಯಿಂದ ಮಾತಾಡಿದಾಗ ಕಾಂತ ಮತ್ತು ಆರ್ಮೆಚರ್ ನಡುವೆ ಇರುವ ವಾಯುಸಾಂದ್ರತೆಯಲ್ಲಿ ಪೊರೆಯ ಕಂಪನದಿಂದಾಗಿ ವ್ಯತ್ಯಾಸ ಉಂಟಾಗುತ್ತದೆ.  ಅದರಿಂದ ಕಾಂತ ಅಭಿವಾಹ (ಮ್ಯಾಗ್ನೆಟಿಕ್ ಫ್ಲಕ್ಸ್) ಸಾಂದ್ರತೆಯಲ್ಲಿಯೂ ವ್ಯತ್ಯಾಸವಾಗಿ ಮಂಡಲದಲ್ಲಿ ಪರ್ಯಾಯ ಪ್ರವಾಹ ಉತ್ಪತ್ತಿಯಾಗುತ್ತದೆ.  ಇದರಿಂದ ಅರ್ಮೆಚರ್ ಮೇಲಿನ ಕಾಮತದ ಸೆಳೆತದಲ್ಲಿ ಏರಿಳಿತಗಳಾಗಿ, ಅದೇ ಮಂಡಲಕ್ಕೆ ಸೇರಿರುವ ಅಭಿಗ್ರಾಹಕದ ಪೊರೆಯ ಮೇಲೂ ಪರಿಣಾಮವಾಗಿ ಅದು ಸಹ ಪ್ರೇಕ್ಷಕದ ಪೊರೆಯಂತೆಯೇ ಕಂಪಿಸಿ ಮಾತು ಕೇಳಿಬರುವುದು.

ಮೊದಲ ಏಕಸ್ವ ಪಡೆವಾಗಲೇ ಬೆಲ್‍ನಿಗೆ ತನ್ನ ಉಪಕರಣದಲ್ಲಿ ಅಳವಡಿಸಿದ್ದ ಪ್ರೇಷಕದ ನ್ಯೂನತೆಗಳು ತಿಳಿದಿದ್ದವು.  ಅದರಿಂದ ನಿರ್ಗಮಿಸುತ್ತಿದ್ದ ಶಕ್ತಿ ದುರ್ಬಲವಾಗಿರುತ್ತಿತ್ತು.  ಅದಕ್ಕಾಗಿ ಆತ ಅನೇಕ ಪ್ರಯೋಗಗಳನ್ನು ನಡೆಸಿ ದ್ರವ ಪ್ರೇಷಕ (ಲಿಕ್ವಿಡ್ ಟ್ರಾನ್ಸ್‍ಮಿಟರ್) ಎಂಬ ಇನ್ನೊಂದು ಪ್ರೇಷಕದ ಏಕಸ್ವನ್ನು ಪಡೆಯಲು ಏಕಸ್ವನ್ನು ಪಡೆದ ಸ್ವಲ್ಪಕಾಲದಲ್ಲೇ ಅರ್ಜಿಯನ್ನು ಸಲ್ಲಿಸಿದ.  ಇದು ವಿದ್ಯುತ್ ರೋಧದ ವ್ಯತ್ಯಾಸವನ್ನು ಅವಲಂಬಿಸಿತ್ತು. ಇದರ ಮೂಲತತ್ತ್ವವನ್ನು ಚಿತ್ರ (3)ರಲ್ಲಿ ಕಾಣಬಹುದು. 

ಚಿತ್ರ-3

ಈ ಪ್ರೇಷಕದಲ್ಲಿ ತೆಳುಪೊರೆಯ ನಡುವಿಗೆ ಒಂದು ಕಡ್ಡಿಯನ್ನು ಸೇರಿಸಿದೆ.  ಇದನ್ನು ಒಂದು ಪಾತ್ರೆಯಲ್ಲಿರುವ ಆಮ್ಲಮಿಶ್ರಿತ ನೀರನ್ನು ತಗಲಿಕೊಂಡಿರುವಂತೆ ಏರ್ಪಡಿಸಿದೆ.  ಶಬ್ದ ಅಲೆಗಳು ಪೊರೆಯನ್ನು ಬಡಿದಾಗ ಉಂಟಾದ ಕಂಪನಗಳಿಂದ ಅದಕ್ಕೆ ಸೇರಿಸಿರುವ ಕಡ್ಡಿ ಆಮ್ಲಮಿಶ್ರಿತ ನೀರಿನಲ್ಲಿ ಕೆಳಕ್ಕೆ ಮೇಲಕ್ಕೂ ಹೋಗುವುದು.  ಆಗ ಮಂಡಲದಲ್ಲಿ ರೋಧ ಹೆಚ್ಚು ಕಡಿಮೆಯಾಗಿ, ಅದರಲ್ಲಿ ಪ್ರವಾಹದ ತೀವ್ರತೆ ಹೆಚ್ಚು ಕಡಿಮೆ ಆಗುತ್ತದೆ.  ಇದೇ ಮಂಡಲದಲ್ಲಿರುವ ಅಭಿಗ್ರಾಹಕದ ಪೊರೆಯೂ ತೀವ್ರತೆಗೆ ಅನುಗುಣವಾಗಿ  ಕಂಪನಗೊಂಡು ಶಬ್ದವನ್ನು ಪುನರುತ್ಪತ್ತಿ ಮಾಡುವುದು.  ಈ ಉಪಕರಣದಿಂದಲೇ ಬೆಲ್ ಪೂರ್ತಿ ಮತ್ತು ಸ್ಪಷ್ಟವಾದ ವಾಕ್ಯವನ್ನು ಮಾತನಾಡಿದ್ದು.  ಇದೇ ಮೂಲತತ್ತ್ವದ ಆಧಾರದ ಮೇಲೆ ರಚಿತವಾದ ಇಂಗಾಲ ಸ್ಪರ್ಶಿ ಪ್ರೇಷಕಗಳೇ ಅತ್ಯಾಧುನಿಕ ದೂರವಾಣಿ ಉಪಕರಣಗಳಲ್ಲೂ ಬಳಕೆಯಲ್ಲಿವೆ.

2 ತಾಂತ್ರಿಕ ಅಭಿವೃದ್ಧಿ :  ಆರಂಭದ ದಿನಗಳಲ್ಲಿ ದೂರವಾಣಿ ಉಪಕರಣಗಳು ತೀರ ಅಸಮರ್ಪಕವಾಗಿದ್ದುವು.  ಅವುಗಳಲ್ಲಿ ಸಂಭಾಷಿಸುವುದು ಬಲು ಕಷ್ಟವಾಗಿತ್ತು.  ಮಾತು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ; ಅಲ್ಲದೆ ನಡುನಡುವೆ ಅಡಚಣೆಗಳೂ ಸಾಕಷ್ಟಿದ್ದವು.  ಮನುಷ್ಯವಾಣಿಯನ್ನು ದೂರಕ್ಕೆ ಪ್ರೇಷಿಸುವುದರಲ್ಲಿರುವ ಸಮಸ್ಯೆಗಳ ಬಗ್ಗೆ ಉಪಕರಣಗಳ ನಡುವೆ ಸಂಪರ್ಕ ಸಾಧಿಸುವಲ್ಲಿ ಇರಬಹುದಾದ ತೊಂದರೆಗಳ ಬಗ್ಗೆ ಆಗಲಿ ಆಗ ಏನೂ ಜ್ಞಾನ ಇರಲಿಲ್ಲ.  ಈ ಕಾರ್ಯ ಸಿದ್ಧತೆಯಲ್ಲಿ ಮೊದಲನೆಯದು ದೂರವಾಣಿ ಉಪಕರಣದ ಪರಿಷ್ಕರಣ ಮತ್ತು ಮಾತನಾಡುವಾಗ ಧ್ವನಿ ಸ್ಪಷ್ಟವಾಗಿಯೂ ಗಟ್ಟಿಯಾಗಿಯೂ ಕೇಳಬೇಕಾಗಿದ್ದು ; ಅಲ್ಲದೆ ಸಂಭಾಷಿಸುತ್ತಿರುವಾಗ ಒಂದು ಸಂಭಾಷಣೆ ಇನ್ನೊಂದಕ್ಕೆ ಅಡ್ಡಿ ಮಾಡದೆ ಮಾತು ಮುಂದುವರಿವ ಸಾಧ್ಯತೆ ಇರಬೇಕಾದುದ್ದು.  ಇದನ್ನು ಪ್ರೇಷಣ ಅಭಿವೃದ್ಧಿ ಎಂದು ಕರೆಯುತ್ತಾರೆ.  ಈ ದಿಶೆಯಲ್ಲಿ ತೃಪ್ತಿಕರ ಅಭಿವೃದ್ಧಿಗಳಾಗಿ ಈಗ ಹೆಚ್ಚು ದೂರಕ್ಕಾಗಲಿ ಕಡಿಮೆ ದೂರಕ್ಕಾಗಲಿ ಸಂಭಾಷಿಸುವುದು ಸುಲಭವಾಗಿದೆ.  ಎರಡನೆಯದು ಸಂಪರ್ಕ ಕಲ್ಪಿಸುವ ಸಾಧ್ಯತೆ ಬಹುಮುಖ್ಯವಾದುದ್ದು.  ಇದಕ್ಕೆ ಸ್ವಿಚಿಂಗ್ ಅಭಿವೃದ್ಧಿ ಎಂದು ಹೆಸರು.  ಇದರಲ್ಲಿಯೂ ಬೇರೆ ಬೇರೆ ದೇಶಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಏಕಕಾಲದಲ್ಲಿ ಒಂದೇ ರೀತಿಯ ಪ್ರಮುಖ ಸಾಧನೆಗಳನ್ನು ಮಾಡಲಾಯಿತು.

3 ದೂರವಾಣಿ ಉಪಕರಣ:  ಇದು ಚಂದಾದಾರರ ವಾಸಸ್ಥಳ ಅಥವಾ ಕಾರ್ಯಾಗಾರದಲ್ಲಿ ಇರುವ ಉಪಕರಣ.  ಇದರಲ್ಲಿ ಇರತಕ್ಕ ಮುಖ್ಯ ಭಾಗಗಳಿವು ; (1) ಪ್ರೇಷಕ-ಶಬ್ದದ ಅಲೆಗಳನ್ನು ಅದೇ ರೂಪದ ವಿದ್ಯುತ್ತರಂಗಗಳಾಗಿ ಪರಿವರ್ತಿಸುವ ಸಾಧನ ; (2) ಅಭಿಗ್ರಾಹಕ-ವಿದ್ಯುತ್ತರಂಗಗಳನ್ನು ಪುನಃ ಶಬ್ದದ ಅಲೆಗಳಾಗಿ ಪರಿವರ್ತಿಸುವ ವಿಧಾನ ; (3) ಸಂಜ್ಞಾಕರಣ ವ್ಯವಸ್ಥೆ (ಗಂಟೆ)-ಚಂದಾದಾರನಿಗೆ ಕರೆ ಬಂದಿದೆ ಎಂದು ಸೂಚನೆ ಕೊಡುವ ಏರ್ಪಾಡು ;  (4) ಸಂಯೋಜಕ ಸ್ವಿಚ್ ಉಪಕರಣದಿಂದ ಇತರ ದೂರವಾಣಿ ನಾಲೆಗಳೊಂದಿಗೆ ಮತ್ತು ಕೇಂದ್ರ ಕಚೇರಿಯಲ್ಲಿರುವ ವ್ಯವಸ್ಥೆಯೊಡನೆ ಸಂಪರ್ಕ ಬೆಳೆಸಲು ಅನುಕೂಲ ಕಲ್ಪಿಸಲು ಸಾಧನ; (5) ಮುಖಫಲಕ (ಡಯಲ್)-ದೂರವಾಣಿ ಕೇಂದ್ರ ಕಚೇರಿಯಲ್ಲಿರತಕ್ಕ ಸಾಧನಗಳಿಗೆ ಸೂಚನೆಕೊಟ್ಟು ಅವುಗಳ ಮೂಲಕ ಬೇಕಾದ ಉಪಕರಣದೊಡನೆ ಸಂಪರ್ಕ ಬೆಳೆಸಲು ಅನುಕೂಲ ಕಲ್ಪಿಸುವ ಸಾಧನ.
ಪ್ರೇಷಕ:  ಬೆಲ್‍ನ ವಿದ್ಯುತ್ಕಾಂತವನ್ನು ಆಧರಿಸಿ ತಯಾರಿಸಿದ ಪ್ರೇಷಕವನ್ನು ಅಭಿಗ್ರಾಹಕವಾಗಿಯೂ ಉಪಯೋಗಿಸಲಾಗುತ್ತಿತ್ತು.  ಮಾತಾಡುವಾಗ ಅದನ್ನು ಬಾಯ ಹತ್ತಿರವೂ ಆಲಿಸುವಾಗ ಕಿವಿಯ ಬಳಿಯೂ ಹಿಡಿದು ಕೊಳ್ಳಲಾಗುತ್ತಿತ್ತು.  ಈ ತೊಂದರೆ ನಿವಾರಣೆ ಮಾಡಲು ಮೊದಲ ಹೆಜ್ಜೆಯಾಗಿ ಎಮಿಲಿ ಬರ್ಲಿನರ್ ಮತ್ತು ತಾಮಸ್ ಎಡಿಸನ್ ಇಬ್ಬರೂ ಸ್ವಲ್ಪ ಅಂತರದಲ್ಲಿಯೇ ಬೇರೆ ಬೇರೆ ರೀತಿಯ ಪ್ರೇಷಕಗಳನ್ನು ಶೋಧಿಸಿದರು.  ಇವೆರಡರಲ್ಲೂ ಚರರೋಧದ (ವೇರಿಯಬಲ್ ರೆಸಿಸ್ಟೆನ್ಸ್) ಆಧಾರವನ್ನೇ ಉಪಯೋಗಿಸಲಾಗುತ್ತಿತ್ತು.  ಬರ್ಲಿನರ್ ಲೋಹದ ಎಲೆಕ್ಟ್ರೋಡನ್ನೂ ಎಡಿಸನ್ ಕಾರ್ಬನ್ ಎಲೆಕ್ಟ್ರೋಡನ್ನೂ ಉಪಯೋಗಿಸುತ್ತಿದ್ದರು.  ರೋಧವನ್ನು ವ್ಯತ್ಯಾಸ ಮಾಡಲು ಕಾರ್ಬನ್ ಕಣವನ್ನು ಉಪಯೋಗಿಸಿದ ಒಂದು ಪ್ರೇಷಕವನ್ನು ಹೆನ್ರಿ ಹೆನಿಂಗ್ಸ್ ಎಂಬ ವಿಜ್ಞಾನಿ 1878ರಲ್ಲಿ ತಯಾರಿಸಿದ.  ಇದೇ ಮಾದರಿಯನ್ನು ಸ್ವಲ್ಪ ವ್ಯತ್ಯಾಸಮಾಡಿ 1890ರಲ್ಲಿ ಆಂತೊನಿ ಸಿ. ವೈಟ್ ಎಂಬಾತ ಗ್ರಾಫೈಟಿನ ಎರಡು ಎಲೆಕ್ಟ್ರೋಡುಗಳನ್ನು ಮಧ್ಯದಲ್ಲಿ ಕಾರ್ಬನ್ ಕಣಗಳನ್ನು ತುಂಬಿದ ಪ್ರೇಷಕವನ್ನು ರಚಿಸಿದ.  ಈ ಮಾದರಿಯ ಪ್ರೇಷಕವನ್ನೇ ಇಂದಿನ ಅನೇಕ ಉಪಕರಣಗಳಲ್ಲಿ ಕಾಣಬಹುದು.

    	ಇಂದಿನ ದೂರವಾಣಿ ಉಪಕರಣಗಳಲ್ಲಿ ಉಪಯೋಗಿಸುತ್ತಿರುವ ಪ್ರೇಷಕದ ರಚನೆಯನ್ನು ಚಿತ್ರ (4)ರಲ್ಲಿ ತೋರಿಸಿದೆ.  ಇದರಲ್ಲಿ ಮುಖ್ಯವಾಗಿ ತಾಳದ ಆಕಾರದ ಲೋಹದ ಹೊದಿಕೆ ಉಂಟು.   

ಚಿತ್ರ-4

ಅದರ ಒಳಭಾಗವನ್ನು ರೋಧಕ್ಕಾಗಿ ಎನೇಮಲ್ ಮಾಡಿದೆ.  ಇದರ ಹಿಂಭಾಗದಲ್ಲಿರುವ ರಂಧ್ರದ ಮೂಲಕ ಒಂದು ಕಾರ್ಬನ್ ಎಲೆಕ್ಟ್ರೋಡನ್ನು ಲಗತ್ತಿಸಿದೆ. ಮುಂಭಾಗದಲ್ಲಿ ಚಿತ್ರದಲ್ಲಿ ತೋರಿಸಿರುವ ಆಕಾರದ ಅಲ್ಯೂಮಿನಿಯಮ್ ಪೊರೆಯನ್ನು ಜೋಡಿಸಿದೆ.  ಪೊರೆಯ ಹಿಂದೆ ಇನ್ನೊಂದು ಕಾರ್ಬನ್ ಎಲೆಕ್ಟ್ರೋಡನ್ನು ಹೊಂದಿಸಿದೆ.  ಇವೆರಡು ಎಲೆಕ್ಟ್ರೋಡುಗಳ ಸುತ್ತಲೂ ಇರುವ ಜಾಗದಲ್ಲಿ ಕಾರ್ಬನ್ ಕಣವನ್ನು ತುಂಬಿದೆ.  ಕಂಪಿಸಲು ಅನುಕೂಲವಾಗುವಂತೆ ಪೊರೆ ಜೋಡಣೆ ಉಂಟು.  ಮುಂಭಾಗದಲ್ಲಿ ಅನೇಕ ರಂಧ್ರಗಳಿರುವ ಮುಚ್ಚಳವಿದೆ.  ಇದರಿಂದಾಗಿ ಪ್ರೇಷಕವನ್ನು ಯಾವ ರೀತಿ ಹಿಡಿದುಕೊಂಡರೂ ಕಾರ್ಬನ್ ಕಣಗಳು ಕಾರ್ಬನ್ ಎಲೆಕ್ಟ್ರೊಡುಗಳ ಒತ್ತಡಕ್ಕೆ ಒಳಪಟ್ಟಿರುತ್ತವೆ.  ಪ್ರೇಷಕ ಮುಚ್ಚಳದಲ್ಲಿ ಇರುವ ರಂಧ್ರಗಳ ಮೂಲಕ ಶಬ್ದದ ಅಲೆಗಳು ಪೊರೆಯ ಮೇಲೆ ಬಡಿದಾಗ ಅದನ್ನು ಕಂಪಿಸಿ ಅದಕ್ಕೆ ಸೇರಿಸಿರುವ ಎಲೆಕ್ಟ್ರೋಡ್ ಮುಂದಕ್ಕೆ ಚಲಿಸಿ ಕಾರ್ಬನ್ ಕಣಗಳಲ್ಲಿ ಒತ್ತಡ ಜಾಸ್ತಿ ಆಗಿ ರೋಧ ಕಡಿಮೆ ಆಗುತ್ತದೆ ;  ಎಲೆಕ್ಟ್ರೋಡ್ ಹಿಂದಕ್ಕೆ ಹೋದಾಗ ಕಣಗಳಲ್ಲಿ ಒತ್ತಡ ಕಡಿಮೆ ಆಗಿ ರೋಧ ಜಾಸ್ತಿ ಆಗುತ್ತದೆ.  ಎರಡು ಕಾರ್ಬನ್ ಎಲೆಕ್ಟ್ರೋಡುಗಳ ನಡುವೆ ಸ್ಥಿರ ವೋಲ್ಟೇಜ್ ಇದೆಯೆಂದು ಭಾವಿಸೋಣ.  ಆಗ ಮೇಲೆ ಹೇಳಿರುವಂತೆ ಪೊರೆಯ ಕಂಪನಗಳಿಂದ ರೋಧದಲ್ಲಿ ವ್ಯತ್ಯಾಸ ಉಂಟಾಗಿ ಮಂಡಲದಲ್ಲಿ ಪ್ರವಾಹ ತೀವ್ರತೆಯೂ ಹೆಚ್ಚು ಕಡಿಮೆ ಆಗುತ್ತದೆ.  ಹೀಗೆ ವಿದ್ಯುತ್ತರಂಗಗಳು ಪೊರೆಯ ಮೇಲೆ ಬಡಿದ ಶಬ್ದದ ಅಲೆಗಳ ಅನುಸಾರವಾಗಿ ವ್ಯತ್ಯಾಸವಾಗುತ್ತದೆ.        
 
ಅಭಿಗ್ರಾಹಕ :  ಆಧುನಿಕ ದೂರವಾಣಿ ಉಪಕರಣಗಳಲ್ಲಿ ಉಪಯೋಗದಲ್ಲಿರುವ ಅಭಿಗ್ರಾಹಕಗಳು ಬೆಲ್‍ನ ಮೊದಲಿನ ಉಪಕರಣದಲ್ಲಿ ಉಪಯೋಗಿಸಿದ ಅಭಿಗ್ರಾಹಕ ಮೂಲತತ್ತ್ವದ ಆಧಾರದ ಮೇಲೆಯೇ ರಚಿತವಾದವು.  ಸ್ಥೂಲವಾಗಿ ಅಭಿಗ್ರಾಹಕದಲ್ಲಿ ಚಿತ್ರ (5) ರಲ್ಲಿರುವಂತೆ ಒಂದು ಸ್ಥಿರ ಕಾಂತ ಉಂಟು.  

ಚಿತ್ರ-5

ಅದರ ಮೇಲೆ ಐ ಆಕಾರದ ಎರಡು ಧ್ರುವಘಟಕಗಳನ್ನೂ ಒಂದೊಂದು ಘಟಕದ ಮೇಲೆ ಎನೇಮಲ್ ತಾಮ್ರದ ತಂತಿಯ ಸುರುಳಿಗಳನ್ನೂ ಜೋಡಿಸಿದೆ. ಧ್ರುವ ಘಟಕದ ಮೇಲೆ ಅದಕ್ಕೆ ತಗಲದಂತೆ ಆದರೆ ಅತಿ ಹತ್ತಿರದಲ್ಲಿಯೇ ಇರುವಂತೆ ಲೋಹದ ಒಂದು ಪೊರೆಯನ್ನು ಅಭಿಗ್ರಾಹಕದ ಮುಖ್ಯ ಮೇಲ್ಭಾಗವನ್ನೇ ಆಧಾರವಾಗಿ ಇಟ್ಟುಕೊಂಡು ನಿಲ್ಲಿಸಲಾಗಿದೆ.  ಪ್ರೇಷಕವೂ ಅಭಿಗ್ರಾಹಕವೂ ಒಂದೇ ಮಂಡಲದಲ್ಲಿ ಇರುವುದರಿಂದ ಪ್ರೇಷಕದಿಂದ ಹೊರಬಿದ್ದ ವಿದ್ಯುತ್ತರಂಗಗಳು ಧ್ರುವಘಟಕದ ಮೇಲಿರುವ ತಂತಿಯ ಸುರಳಿಗಳ ಮೂಲಕ ಪ್ರವಹಿಸಿದ ಕೂಡಲೇ ಪೊರೆಯ ಮೇಲಿನ ಕಾಂತದ ಸೆಳವು ಹೆಚ್ಚು ಕಡಿಮೆಯಾಗಿ ಅಭಿಗ್ರಾಹಕದ ಪೊರೆ ಕಂಪಿಸಿ ಅದರಿಂದ ಮನುಷ್ಯವಾಣಿ ಕೇಳಿ ಬರುತ್ತದೆ.

ಹಸ್ತವಾರ (ಹ್ಯಾಂಡ್ ಸೆಟ್) :  ಮೊದಲಿನ ದೂರವಾಣಿ ಉಪಕರಣಗಳಲ್ಲಿ ಪ್ರೇಷಕ ಮತ್ತು ಅಭಿಗ್ರಾಹಕಗಳು ಬೇರೆ ಬೇರೆಯಾಗಿದ್ದು, ಅಭಿಗ್ರಾಹಕವನ್ನು ಕಿವಿಯ ಹತ್ತಿರ ಹಿಡಿದುಕೊಂಡು ಕೇಳಬೇಕಾಗಿತ್ತು ; ಮತ್ತು ಮಾತಾಡುವಾಗ ಪ್ರೇಷಕ ಅಡಕವಾಗಿರುವ ಇನ್ನೊಂದು ಭಾಗದ ಕಡೆ ಉಚ್ಚರಿಸಬೇಕಾಗಿತ್ತು.  ಇದಕ್ಕೆ ಬದಲಾಗಿ ಪ್ರೇಷಕ ಅಭಿಗ್ರಾಹಕ ಎರಡನ್ನೂ ಹಸ್ತರವಾರ ಎಂಬ ಒಂದೇ ಉಪಕರಣದ ಭಾಗದಲ್ಲಿ ಅಡಕಮಾಡಲು ಸೂಚಿಸಿದವರು ಸಿ.ಎ. ಮಕಾಯ್ ಮತ್ತು ಜಿ.ಇ. ಪ್ರಿಜೆಟ್ ಎಂಬ ಇಂಗ್ಲಿಷ್ ಸಂಶೋಧಕರು.

ಸಂಜ್ಞಾಕರಣ ವ್ಯವಸ್ಥೆ (ಸಿಗ್ನಲಿಂಗ್ ಸಿಸ್ಟಮ್) :  ಬೆಲ್ ತಯಾರಿಸಿದ ಉಪಕರಣದಲ್ಲಿ ಇಚ್ಚಿತ ವ್ಯಕ್ತಿಗೆ ಸಂಜ್ಞೆ ಯಾ ಸೂಚನೆ  ಕೊಡಲು ಪ್ರೇಷಕದ ಪೊರೆಯನ್ನು ಯಾವುದಾದರೂ ಒಂದು ರೀತಿಯಲ್ಲಿ ತಾಡಿಸಬೇಕಾಗಿತ್ತು.  ಇದನ್ನು ನಿಲ್ಲಿಸಿ ವಾಟ್ಸ್‍ನ್ ತಾಡಕ ಎಂಬ ವಿಧಾನವನ್ನು ಬಳಕೆಗೆ ತರಲಾಯಿತು.  ಇದರಲ್ಲಿ ಮಾತಾಡಲು ಇಚ್ಚಿಸುವ ವ್ಯಕ್ತಿ ಬೇಕಾದವನಿಗೆ ಸೂಚನೆ ಕೊಡಲು ಪ್ಲಂಜರ್ ಅಥವಾ ಸಣ್ಣ ಸುತ್ತಿಗೆಯಿಂದ  ಪೊರೆಯ ಮೇಲೆ ಬಡಿಯಬೇಕಿತ್ತು.  ಈ ಎರಡೂ ವಿಧಾನಗಳೂ ಸೂಕ್ತವಾಗಿರಲಿಲ್ಲ.  ಹೀಗಾಗಿ ಬೇರೊಂದು ವಿಧಾನವನ್ನು ಅನ್ವೇಷಿಸಬೇಕಾಯಿತು.  ವಾಟ್ಸನ್ ಕಾಂತಚಾಲಿತ ಜನಕವನ್ನು (ಮ್ಯಾಗ್ನೆಟೊ ಜನರೇಟರ್) ಬಳಕೆಗೆ ತಂದ.  ಇದರಲ್ಲಿ ಎರಡು ಉಪಕರಣಗಳ ಬಳಿಯೂ ಒಂದೊಂದು ಗಂಟೆ ಇತ್ತು.  ಅದು ಕೆಲಸಮಾಡಲು ಬೇಕಾಗುವ ವಿದ್ಯುತ್ತನ್ನು ಒದಗಿಸಲು ಜನಕವನ್ನು ಅಳವಡಿಸಲಾಯ್ತು.  ಸಂಜ್ಞೆ ನೀಡಲು ಜನಕದ ಹಿಡಿಯನ್ನು ಸುತ್ತಬೇಕಾಗಿತ್ತು.  ಈ ಸಾಧನ ಇರುವ ಉಪಕರಣಗಳು ಈಗಲೂ ಕೆಲವು ಕಡೆ ಬಳಕೆಯಲ್ಲಿವೆ.

ಈಗಿನ ಉಪಕರಣಗಳಲ್ಲಿ  ಇದಕ್ಕೆ ಬದಲಾಗಿ ಚಿತ್ರ (6)ರಲ್ಲಿ ಕಾಣುವ ಕಾಂತಚಾಲಿತ ಗಂಟೆಯನ್ನು ಉಪಯೊಗಿಸುತ್ತಾರೆ.  ಇದು ಕೆಲಸ ಮಾಡುವ ರೀತಿಯನ್ನು ಚಿತ್ರ (7)ರಲ್ಲಿ ವಿವರಿಸಿದೆ.  ಂ  ಮತ್ತು ಃ ಎಂಬ ಮೆದು ಕಬ್ಬಿಣದ ತುಂಡುಗಳ ಮೇಲೆ ಎನೇಮಲ್ ತಾಮ್ರ ತಂತಿಯ ಸುರಳಿಯನ್ನು ಸುತ್ತಿದೆ.  ಒಂದು ತುದಿಯಲ್ಲಿ ಅವೆರಡು ಕಬ್ಬಿಣದ ತುಂಡುಗಳನ್ನು ಇನ್ನೊಂದು ನೊಗಕ್ಕೆ (ಮೆದು ಕಬ್ಬಿಣದ ಭಾಗ) ಸೇರಿಸಿದೆ.

ಚಿತ್ರ-6

 ಶಾಶ್ವತ ಕಾಂತವೊಂದನ್ನು ಅದರ ಮಧ್ಯಭಾಗಕ್ಕೆ ಜೋಡಿಸಿದೆ.  ನಾಲ್ಕು ಭಾಗಗಳಿಗೆ ಒಟ್ಟಾಗಿ ಇ ಆಕಾರ ಉಂಟು.  ಅದರ ಬಿಡುವಾದ ಕಡೆ ಒಂದು ಆರ್ಮೆಚರ್ ಇದೆ.  

ಚಿತ್ರ-7

ಇದರ ಮಧ್ಯಭಾಗಕ್ಕೆ ಒಂದು ತಿರುಗಣಿಗೂಟದ ಮೂಲಕ ತಾಡಕ (ಸ್ಟ್ರ್ಯೆಕರ್) ಎಂಬ ಭಾಗವನ್ನು ಸೇರಿಸಿದೆ.  ಇದರ ಮುಂಭಾಗದಲ್ಲಿ ಹಿತ್ತಾಳೆಯ ಒಂದು ಚಿಕ್ಕ ಸುತ್ತಿಗೆ ಉಂಟು.  ಗುಂಡು ಅಲುಗಿದಾಗ ಹೊಡೆಯಲು ಅನುಕೂಲವಾಗುವಂತೆ ಅರ್ಧ ಗೋಳಾಕಾರದ ಎರಡು ಜಾಗಟೆಗಳು ಇವೆ.  ಈ ಸಾಧನ ಕೆಲಸ ಮಾಡದಿದ್ದ ಕಾಲದಲ್ಲಿ ಶಾಶ್ವತಕಾಂತದ ಕಾಂತಾಭಿವಾಹ (ಮ್ಯಾಗ್ನೆಟೆಕ್ ಫ್ಲಕ್ಸ್) ಎರಡು ಸಮಾಂತರ ಪಥಗಳಲ್ಲಿ ಹಾದುಹೊಗುತ್ತದೆ. ಮೊದಲನೆಯ ಸುರಳಿ ಂ  ನೊಗದ ಎಡಭಾಗ ಮತ್ತು ಸುರಳಿ-ಆರ್ಮೆಚರಿಗೂ ಮಧ್ಯೆ ಇರುವ ಸಂದು P ಇವುಗಳ ಮೂಲಕವೂ ಎರಡನೆಯದು ನೊಗದ ಬಲಭಾಗ ಸುರಳಿ ಃ ಮತ್ತು ಸುರುಳಿಗೂ ಆರ್ಮೆಚರಿಗೂ ಮಧ್ಯೆ ಇರುವ ಸಂದು ಕಿ ಮೂಲಕವೂ ಹೋಗುತ್ತದೆ.  ಈ ಸ್ಥಿತಿಯಲ್ಲಿ ಆರ್ಮೆಚರ್ ಸಮತೋಲದಲ್ಲಿರುವತ್ತದೆ.  ಸುರುಳಿಯಲ್ಲಿ ಪರ್ಯಾಯ ಪ್ರವಾಹ ಹರಿದಲ್ಲಿ P ಮತ್ತು ಕಿ ವಾಯು ತೆರಪಿನಲ್ಲಿ ಉಂಟಾಗುವ ಕಾಂತಾಭಿವಾಹ ಸಾಂದ್ರತೆಯ ವ್ಯತ್ಯಾಸದಿಂದ ಆರ್ಮೆಚರ್ ಎಡಕ್ಕೂ ಬಲಕ್ಕೂ ತೊನೆದಾಡಲು ಪ್ರಾರಂಭಿಸಿ ಅದಕ್ಕೆ ಸೇರಿಸಿರುವ ಸುತ್ತಿಗೆ ಅರ್ಧಗೊಳಾಕಾರದ ಜಾಗಟೆಗಳಿಗೆ ತಗುಲಿ ಗಂಟೆ ಕೇಳಿಬರುತ್ತದೆ.

ಸಂಯೋಜಕ ಸ್ವಿಚ್ (ಹೂಕ್ ಸ್ವಿಚ್) :  ಉಪಕರಣಕ್ಕೆ ಬರುವ ಸಂಜ್ಞೆಗಳನ್ನು ಸ್ವೀಕರಿಸಲು ಮತ್ತು ವಿನಿಮಯ ಕೇಂದ್ರದೊಡನೆ ಉಪಕರಣವನ್ನು ಪ್ರತಿಯೊಂದು ಬಾರಿ ಮಾಡಬೇಕಾದಾಗ ಮತ್ತು ಮಾತು ಮುಗಿದ ಬಳಿಕ ಈ ಸ್ವಿಚ್ಚನ್ನು ಪರಿಕರ್ಮಿಸಬೇಕಾಗಿತ್ತು.  ಈಗಿನ ಉಪಕರಣಗಳಲ್ಲಿ ಹಸ್ತವಾರವನ್ನು ಉಪಕರಣದ ಮೇಲೆ ಇಟ್ಟಕೂಡಲೇ ಸ್ವಿಚ್ ಪರಿಕರ್ಮಿಸುವಂತೆ ಏರ್ಪಡಿಸಿದೆ.
ಮುಖಫಲಕ (ಡಯಲ್) :  ದೂರವಾಣಿ ಉಪಕರಣದಲ್ಲಿ ಅಡಕವಾಗಿದೆ.  ಇದು ಇಲ್ಲವಾಗಿದ್ದಲ್ಲಿ ಪ್ರತಿಯೊಂದು ಸಾರಿ ನಮ್ಮ ಉಪಕರಣವನ್ನು ಇನ್ನೊಂದು ಉಪಕರಣದ ಜೊತೆಗೆ ಸಂಯೋಜಿಸಿ ಕ್ಷಿಪ್ರ ಸಂಪರ್ಕ ಸಾಧಿಸಲು ಸಾಧ್ಯವಾಗದೆ ದೂರವಾಣಿ ಪರಿಕರ್ಮಿಯ ನೆರವನ್ನು ಅಪೇಕ್ಷಿಸಬೇಕಾಗಿತ್ತು.

ಸ್ಥೂಲವಾಗಿ ಮುಖಫಲಕದ (ಚಿತ್ರ 8) ಮುಂಭಾಗದಲ್ಲಿ ಒಂದು ವೃತ್ತಾಕಾರದ ಹಲಗೆಯೂ ಇದರ ಹಿಂದೆ ಅದಕ್ಕೆ ಸೇರಿದಂತೆ ಇನ್ನೊಂದು ಹಲಗೆಯೂ ಉಂಟು. ಮೇಲಿನ ಹಲಗೆಗೆ ಬೆರಳು ಫಲಕ ಎಂದೂ ಹಿಂದಿನ ಹಲಗೆಗೆ ಸಂಖ್ಯಾತಟ್ಟೆ ಎಂದೂ ಹೆಸರು.  ಸಂಖ್ಯಾತಟ್ಟೆಯಲ್ಲಿ 0 ಯಿಂದ ಹಿಡಿದು 9 ರ ವರೆಗೆ ಎಲ್ಲ ಅಂಕೆಗಳನ್ನೂ ಬರೆದಿದೆ.  ಮುಂದಿನ ಹಲಗೆಯಲ್ಲಿ ಈ ಅಂಕೆಗಳ ಮೇಲೆ ಸರಿಯಾಗಿ ಬೆರಳನ್ನಿಡಲು ಸಾಧ್ಯವಾಗುವಂತೆ ರಂಧ್ರಗಳನ್ನು ಮಾಡಿ ಮೇಲಿನ ಹಲಗೆಯನ್ನು ಸಂಖ್ಯಾತಟ್ಟೆಯ ಮೇಲೆ ತಿರುಗಿಸುವಂತೆ ಅನುಕೂಲ ಕಲ್ಪಿಸಿದೆ. ಅದೇ ವೇಳೆ ಮುಂದಕ್ಕೆ ತಿರುಗಿಸದಂತೆ ತಡೆಯಲು ಒಂದು ಭಾಗದಲ್ಲಿ ಬೆರಳ ತಡೆ ಉಂಟು.  ದೂರವಾಣಿಯಲ್ಲಿ ಮಾತಾಡಲು ಇಚ್ಚಿಸಿದಾಗ ಹಸ್ತವಾರವನ್ನು ಉಪಕರಣದಿಂದ ಎತ್ತಿ ಕಿವಿಗೆ ಹಿಡಿದುಕೊಂಡರೆ ಆಗ ಒಂದು ಶಬ್ದ ಕೇಳುತ್ತದೆ.  ಯಾವ ಉಪಕರಣದ ಜೊತೆ ಬೇಕಾದರೂ ಸಂಪರ್ಕ ಸಾಧಿಸಬಹುದೆಂದು ಸೂಚನೆ ಇದು.  ಇದಕ್ಕೆ ಫಲಕನಾದ (ಡಯಲ್ ಟೋನ್) ಎಂದು ಹೆಸರು.  ಇದು ಸ್ವಯಂಚಾಲಿತ ಕೇಂದ್ರದಲ್ಲಿರುವ ಒಂದು ಸಾಧನದಿಂದ ಉತ್ಪತ್ತಿಯಾಗುತ್ತದೆ.  

ಈ ನಾದ ಕೇಳಿಸದಿದ್ದಾಗ ನಮ್ಮ ದೂರವಾಣಿ ಕೆಲಸ ಮಾಡದು.  ಈಗ ಯಾವ ಉಪಕರಣದ ಚಂದಾದಾರರೊಡನೆ ಮಾತಾಡಬೇಕೊ ಸಂಖ್ಯೆಯ ಮೊದಲನೆಯ ಅಂಕೆಗೆ ಸರಿಯಾಗಿ ರಂಧ್ರದಲ್ಲಿ ಬೆರಳಿಟ್ಟು ಬೆರಳು ಫಕಲವನ್ನು ಬೆರಳತಡೆಯ ತನಕ ತಿರುಗಿಸಿ ಅದನ್ನು ಬಿಟ್ಟಲ್ಲಿ ಅದು ಸ್ಟ್ರಿಂಗ್ ಸಹಾಯದಿಂದ ಮೊದಲಿನ ಸ್ಥಿತಿಗೆ ಬರುತ್ತದೆ.	ಈ ತೆರನಾಗಿ ಇಡೀ ಸಂಖ್ಯೆ ಮುಗಿವ ತನಕ ತಿರುಗಿಸಿ ಕಾದು ಮತ್ತೆ ತಿರುಗಿಸಿ ಮುಗಿಸಬೇಕು.  ಹೀಗೆ ಒಂದೊಂದು ಬಾರಿ ತಿರುಗಿಸಿದಾಗಲೂ ಅದು ಸ್ವಸ್ಥಾನಕ್ಕೆ ಮರಳುವಾಗ ಫಲಕದ ಹಿಂದುಗಡೆ ಇರುವ ಸ್ಪಂದನ ಸ್ಪ್ರಿಂಗ್‍ಗಳು ಆಯಾ ಅಂಕಗಳಷ್ಟು ಸ್ಪಂದನಗಳನ್ನು ನಿಮಯ ಕೇಂದ್ರದಲ್ಲಿರುವ ಸ್ವಯಂ ಚಾಲಿತ ವ್ಯವಸ್ಥೆಗೆ ರವಾನಿಸುತ್ತದೆ.  ಈ ಸ್ಪಂದನದಿಂದ ಸೂಚನೆಗಳನ್ನು ಸ್ವೀಕರಿಸಿ ಅಲ್ಲಿನ ವ್ಯವಸ್ಥೆಗಳು ಕ್ರಿಯೆ ನಡೆಸಿ ನಮಗೆ ಬೇಕಾದ ಉಪಕರಣದೊಂದಿಗೆ ನಮ್ಮ ಉಪಕರಣವನ್ನು ಜೋಡಿಸಿ ಸಂಭಾಷಣೆಗೆ ಅನುಮಾಡಿಕೊಡುತ್ತವೆ.
ಬೆಲ್ ತಯಾರಿಸಿದ ಮೊದಲಿನ ಉಪಕರಣದಿಂದ ಮೊದಲ್ಗೊಂಡು ದೂರವಾಣಿ ಉಪಕರಣಗಳು ಅನೇಕ ಬದಲಾವಣೆಗಳನ್ನು ಪಡೆದಿದೆ.  ಒಂದೊಂದು ಉಪಕರಣವನ್ನು ತಯಾರಿಸುವಾಗಲೂ ಅದರ ಕಾರ್ಯದಲ್ಲಿ ಮತ್ತು ಅದರ ಹೊರನೋಟದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.  ಆ ಪೈಕಿ ಕೆಲವನ್ನು ಚಿತ್ರ (9)ರಲ್ಲಿ ಕಾಣಬಹುದು.  1876ರಲ್ಲಿ ಬೆಲ್ ತಯಾರಿಸಿದ ಉಪಕರಣವನ್ನು ಎಡಗಡೆ ಮೇಲ್ಭಾಗದಲ್ಲಿಯೂ ಇತ್ತೀಚೆಗೆ ತಯಾರಿಸಿರುವ ಒತ್ತುಗುಂಡಿದೂರವಾಣಿ ಉಪಕರಣವನ್ನು ಬಲಗಡೆ ಕೆಳಭಾಗದಲ್ಲಿಯೂ ತೋರಿಸಿದೆ.  ಫಲಕ ತಿರುಗಿಸಲು ಬೇಕಾಗುವ ವೇಳೆಯನ್ನು ಕಡಿಮೆ ಮಾಡಲು ಮತ್ತು ಶೀಘ್ರವಾಗಿ ಸಂಪರ್ಕ ಸಾಧಿಸಲು ಒತ್ತುಗುಂಡಿಯ ಉಪಕರಣಗಳು ಅನೇಕ ಕಡೆ ಬಳಕೆಗೆ ಬರುತ್ತಿವೆ.  ಸಾಧಾರಣವಾಗಿ ಉಪಯೋಗಿಸುವ ಉಪಕರಣಗಳ ಜೊತೆಗೆ ಚಂದಾದಾರನಿಗೆ ಅವರವರ ಇಚ್ಚೆ ಮತ್ತು ಸೌಕರ್ಯಗಳನ್ನು ಅನುಸರಿಸಿ ಬೇರೆ ಬೇರೆ ರೀತಿಯ ಸೌಲಭ್ಯ ಇರುವ ಉಪಕರಣಗಳೂ ತಯಾರಾಗುತ್ತಿವೆ.  ಒಂದೆರಡನ್ನು ಕೆಳಗೆ ವಿವರಿಸಿದೆ.

	ಪ್ರವರ್ಧನವಾಣಿ (ಆ್ಯಂಪ್ಲಿಫೋನ್) :  ಮಂದಕಿವಿಯುಳ್ಳವರ ಉಪಯೊಗಕ್ಕಾಗಿ ತಯಾರು ಮಾಡಿರುವ ಉಪಕರಣವಿದು.

    	ಸ್ವಿಚಿಂಗ್ ದೂರವಾಣಿ :  ಇದರಲ್ಲಿ ಎರಡು ವಿಧದ ಉಪಕರಣಗಳಿವೆ.  ಮೊದಲನೆಯದು ಒಂದೇ ಮನೆಯಲ್ಲಿ ಅಥವಾ ಕಾರ್ಯಾಗಾರದಲ್ಲಿ ಎರಡು ಉಪಕರಣಗಳಿದ್ದು ಎರಡಕ್ಕೂ ಒಂದೇ ಸಂಖ್ಯೆ ಇರುವುದು.  ಎರಡರಿಂದಲೂ ಇತರ ಉಪಕರಣಗಳೊಡನೆ ಮಾತಾಡುವುದು ಸಾಧ್ಯ.  ಮತ್ತು ಪರಸ್ಪರ ಸಂಭಾಷಣೆ ನಡೆಸುವುದೂ ಸಾಧ್ಯವಿದೆ.  ಇವುಗಳಲ್ಲಿ ಒಂದು ಉಪಕರಣವನ್ನು ಪ್ರಧಾನ ಉಪಕರಣವೆಂದು ಇನ್ನೊಂದನ್ನು ವಿಸ್ತರಣೆ ಎಂದೂ ಕರೆಯುತ್ತಾರೆ.  ವಿಸ್ತರಣೆ ಅಧಿಕಾರಿಯ ಬಳಿ ಇದ್ದು, ಆತನಿಗೆ ಬರುವ ಕರೆಗಳೆಲ್ಲವೂ ಸಹಾಯಕನ ಮೂಲಕ ಬರಲು ಅನುಕೂಲತೆ ಉಂಟು.  ಬೇಕಾದಲ್ಲಿ ಸ್ವತಂತ್ರವಾಗಿ ಇತರರೊಡನೆ ಸಹಾಯಕನೊಡನೆಯೂ ಮಾತಾಡುವ ಸೌಲಭ್ಯವಿದೆ.  ಅವರಿಬ್ಬರಲ್ಲಿ ಒಬ್ಬರಿಗೊಬ್ಬರು ಸೂಚನೆ ಕೊಡಲು ಬಸ್óಕಾರಿ (ಬಸóರ್) ಎಂಬ ಸಾಧನ ಉಂಟು.  ಇನ್ನೊಂದು ವಿಧವಾದ ಸ್ವಿಚಿಂಗ್ ದೂರವಾಣಿಯಲ್ಲಿ ಮೇಲೆ ಹೇಳಿದ ಎರಡು ಉಪಕರಣಗಳೂ ಇರುವುವು.  ಅವು ದೂರದಲ್ಲಿ ಇರಬಹುದು.  ಇಲ್ಲಿ ಒಂದು ಉಪಕರಣದಿಂದ ಇನ್ನೊಂದು ಉಪಕರಣಕ್ಕೆ ಸಂಜ್ಞೆ ಕೊಡಬೇಕಾದರೆ ಕಾಂತಚಾಲಿತಜನಕವನ್ನು ಉಪಯೋಗಿಸಬೇಕಾಗುವುದು.

4 ಸ್ವಿಚ್ ಹಲಗೆ :  ದೂರವಾಣಿಯನ್ನು ಉಪಜ್ಞಿಸಿದ ಮೊದಲಲ್ಲಿ ಸಂಭಾಷಣೆ ಎರಡು ಉಪಕರಣಗಳ ನಡುವೆ ಮಾತ್ರ ಸಾಧ್ಯವಿತ್ತು.  ಇದರ ಉಪಯೋಗ ಹೆಚ್ಚಾದಂತೆಲ್ಲ ಒಂದು ಉಪಕರಣದಿಂದ ಸುತ್ತಮುತ್ತಲಿರುವ ಯಾವ ಯಾವ ಉಪಕರಣದೊಡನಾದರೂ ಸಂಪರ್ಕ ಬೆಳೆಸುವ ಸಾಧ್ಯತೆಯನ್ನು ಪರಿಶೀಲಿಸಬೇಕಾದ್ದರಿಂದ ತಂತ್ರವಿದ್ದರು ಇದರ ಕಡೆ ಲಕ್ಷ್ಯ ಹರಿಸಿದರು.  ಇದನ್ನು ಯಶಸ್ವಿಯಾಗಿ ಸಾಧಿಸದಿದ್ದಲ್ಲಿ ದೂರವಾಣಿ ಕೇವಲ ಒಂದು ವೈಜ್ಞಾನಿಕ ಆಟಿಕೆಯಾಗಿಯೇ ಉಳಿಯಬೇಕಾಗುತ್ತಿತ್ತು.  ಈ ದಿಸೆಯಲ್ಲಿ ಮೊದಲ ಹೆಜ್ಜೆಯೇ ಸ್ವಿಚ್ ಹಲಗೆ (ಸ್ವಿಚ್ ಬೋರ್ಡ್).  ಇದನ್ನು ಸಾಧಿಸಲು ಪ್ರತಿಯೊಂದು ಉಪಕರಣವನ್ನೂ ಇತರ ಎಲ್ಲ ಉಪಕರಣಗಳೊಡನೆ ಬೇರೆ ಬೇರೆಯಾಗಿ ತಂತಿಯ ಮೂಲಕ ಸೇರಿಸಬೇಕಾಗಿತ್ತು.  ಇಲ್ಲವೆ ಎಲ್ಲ ಉಪಕರಣಗಳನ್ನು ಕೇಂದ್ರ ಕಚೇರಿಯಲ್ಲಿ ತಕ್ಕ ಸಾಧನವನ್ನು ಏರ್ಪಡಿಸಿ ಅದಕ್ಕೆ ಸಂಯೋಜಿಸಬೇಕಾಗಿತ್ತು.  ಮೊದಲನೆಯ ವಿಧಾನ ಸುಲಭಸಾಧ್ಯವಲ್ಲ.  ಹೀಗಾಗಿ ಎರಡನೆಯ ವಿಧಾನ ಬಳಕೆಗೆ ಬಂದಿದೆ.  ಹೀಗೆ ಸ್ಥಾಪಿತವಾದ ಕೇಂದ್ರಕ್ಕೆ ದೂರವಾಣಿ ವಿನಿಮಯ ಕೇಂದ್ರ (ಟೆಲಿಪೋನ್ ಎಕ್ಸ್‍ಚೇಂಜ್) ಎಂಬ ಹೆಸರುಂಟು.  ಇತ್ತ ದೂರವಾಣಿಯ ಉಪಯೋಗ ಪಡೆಯುವವರು ಯಾವುದಾದರೊಂದು ದರದಲ್ಲಿ ಚಂದಾಹಣವನ್ನು ಪಾವತಿ ಮಾಡಬೇಕಾಗಿತ್ತು.  ಆದ್ದರಿಂದ ಅವರನ್ನು ಚಂದಾದಾರರು ಎಂದು ಕರೆಯಲಾಯ್ತು.  ಆ ಕಚೇರಿಯಿಂದ ನೆರವು ಪಡೆಯುವುದು ಸಂಪರ್ಕ ಬೆಳೆಸುವುದೂ ಪರಿಕರ್ಮಿಗಳ ನೆರವಿನಿಂದ ಆಗಬೇಕಾಗಿತ್ತು.  ಇಂಥ ಕೇಂದ್ರಕ್ಕೆ ಮನುಷ್ಯಚಾಲಿತ ವಿನಿಮಯ ಕೇಂದ್ರ ಎಂಬ ಹೆಸರು ಬಂತು.  ಅಲ್ಲಿ ಸಹಾಯ ಮಾಡುವ ಕೆಲಸಗಾರರನ್ನು ದೂರವಾಣಿ ಪರಿಕರ್ಮಿಗಳೆಂದು ಕರೆದರು. ಮೊದಲನೆಯ ಸ್ವಿಚ್ ಹಲಗೆ 1977 ರ ಮೇ 17ರಂದು ಇ.ಟಿ.ಹೋಮ್ಸ್. ಎಂಬಾತನ ಕಚೇರಿಯಲ್ಲಿ ಸ್ಥಾಪಿತವಾಯ್ತು.  ಬಲು ಕಾಲ ಇದರ ಉಪಯೋಗವನ್ನು ಪಡೆಯಲು ಜನ ಮುಂದೆ ಬರಲಿಲ್ಲ.  ದುಬಾರಿ ವೆಚ್ಚ ಮತ್ತು ದೂರವಾಣಿಯ ಪ್ರಯೋಜನ ತಿಳಿಯದಿರುವಿಕೆ ಇವೇ ಇದರ ಕಾರಣ.  ವಾಣಿಜ್ಯಗಾತ್ರದಲ್ಲಿ ಸ್ಥಾಪಿತವಾದ ವಿನಿಮಯ ಕೇಂದ್ರವನ್ನು ಪ್ರಥಮವಾಗಿ ಪಡೆದ ಗೌರವ ಅಮೆರಿಕದ ನ್ಯೂಹೇವನ್‍ಗೆ ಲಭಿಸಿದೆ.  ಅಲ್ಲಿನ ಕೇಂದ್ರ 1878ರ ಜನವರಿ 28ರಂದು ಕಾರ್ಯಾರಂಭ ಮಾಡಿತು.  28 ಉಪಕರಣಗಳಿಗೆ ಅಲ್ಲಿ ಸೌಕರ್ಯವಿತ್ತು.

ಸ್ವಿಚ್ ಹಲಗೆಯಲ್ಲಿ ಒಂದೊಂದು ಉಪಕರಣಕ್ಕೂ ಸಂಬಂಧಿಸಿದಂತೆ ಒಂದುಗುಳಿ (ಜ್ಯಾಕ್) ಎಂಬ ಆಧಾರ ಉಂಟು.  ಇದಕ್ಕೆ ಉಪಕರಣದಿಂದ ತಂದ ದೂರವಾಣಿ ತಂತಿಮಾರ್ಗದ ಕೊನೆಯನ್ನು ಲಗತ್ತಿಸಿದೆ.  ಎರಡೂ ತುದಿಯಲ್ಲೂ ಮೊನಚಾದ ಬಿರಡೆಗಳಿರುವ ಬಳುಕು ರಜ್ಜುಗಳಿವೆ.  ಕರೆಯಲ್ಪಟ್ಟ ಮತ್ತು ಕರೆದ ಚಂದಾದಾರರ ಉಪಕರಣಗಳಿಗೆ ಸಂಬಂಧಿಸಿದಂತೆ ಗುಳಿಗಳಲ್ಲಿ ಬಳಕುರಜ್ಜುಗಳ ನೆರವಿನಿಂದ ಬಿರಡೆಗಳನ್ನು ಸಿಕ್ಕಿಸಿ ಅವರ ನಡುವೆ ಸಂಪರ್ಕ ಏರ್ಪಡಿಸಲಾಗುವುದು.  ಈ ಕೆಲಸವನ್ನು ದೂರವಾಣಿ ಪರಿಕರ್ಮಿಗಳು ಮಾಡುತ್ತಾರೆ.  ಕರೆದ ಚಂದಾದಾರನೊಡನೆ ಮಾತಾಡುವುದಕ್ಕೆ ಅವರಿಂದ ಸೂಚನೆ ಪಡೆಯುವುದಕ್ಕೆ ಅವರಿಗೆ ಬೇಕಾದ ಉಪಕರಣದ ಸಂಖ್ಯೆ ತಿಳಿದುಕೊಳ್ಳುವುದಕ್ಕೆ ಮತ್ತು ಕರೆಯಬೇಕಾದ ಉಪಕರಣಕ್ಕೆ ಸೂಚನೆ ಕೊಡುವುದಕ್ಕೆ ಮನುಷ್ಯಚಾಲಿತ ವಿನಿಮಯ ಕೇಂದ್ರದಲ್ಲಿ ಅನುಕೂಲತೆಗಳುಂಟು.

	ದೂರವಾಣಿಯ ಉಪಯೋಗ ಮತ್ತು ಅನುಕೂಲತೆಗಳು ಜನರಿಗೆ ಮನದಟ್ಟಾಗುತ್ತ ಬಂದಂತೆಲ್ಲ ಉಪಕರಣಗಳ ಸಂಖ್ಯೆ ಜಾಸ್ತಿಯಾಯಿತು.  ಇದರಿಂದ ಸ್ವಿಚ್ ಹಲಗೆಗೆ ಲಗತ್ತಿಸಬೇಕಾದ ಮಾರ್ಗಗಳು ಜಾಸ್ತಿಯಾದದ್ದಲ್ಲದೆ ಒಬ್ಬನೇ ಪರಿಕರ್ಮಿಯಿಂದ ಕೆಲಸ ನಿಭಾಯಿಸಲು ಸಾಧ್ಯವಾಗದೆ ಎರಡು ಸ್ವಿಚ್ ಹಲಗೆಗಳ ಬಳಕೆಯೂ ಮುಂದೆ ಬಹು ಸ್ವಿಚ್ ಹಲಗೆಗಳ ಬಳಕೆಯೂ ರೂಢಿಗೆ ಬಂದವು.

ಇದರಲ್ಲಿ ಉಪಕರಣಗಳಿಗೆ ಸಂಬಂಧಿಸಿದ ಗುಳಿಗಳು ಹಲಗೆಯಲ್ಲಿ ಒಂದೇ ಜಾಗದಲ್ಲಿ ಇರುವುದರ ಬದಲು ಅನೇಕ ಜಾಗಗಳಲ್ಲಿದ್ದು, ಅವುಗಳ ಪೈಕಿ ಯಾವುದಾದರೊಂದರ ಮೂಲಕ ಸಂಪರ್ಕ ಏರ್ಪಡಿಸಲು ಸಾಧ್ಯತೆ ಇತ್ತು.  ಇದರಿಂದ ಪರಿಕರ್ಮಿಗಳು ತಮಗೆ ನಿಲುಕದ ಗುಳಿ ಬೇಕಾಗಿದ್ದಲ್ಲಿ ಪಕ್ಕದವರಿಗೆ ಹೇಳಿ ಅವರ ಸಹಾಯದಿಂದ ಸಂಪರ್ಕಸಾಧಿಸಬಹುದಾಗಿತ್ತು.  ಚಂದಾದಾರರ ಸಂಖ್ಯೆ ಬೆಳೆಯುತ್ತ ಹೋದಂತೆ ಈ ವ್ಯವಸ್ಥೆ ಕೂಡ ಅಷ್ಟು ಸಮರ್ಪಕವಾಗಿ ತೋರಲಿಲ್ಲ.  ಜೊತೆಗೆ ಪರಿಕರ್ಮಿಗಳ ಸಂಖ್ಯೆಯೂ ಜಾಸ್ತಿಯಾಗಿ ಹೊಸ ಸಮಸ್ಯೆಗಳು ಉದ್ಭವಿಸಿದುವು.  ಇದಕ್ಕಾಗಿ ಸ್ವಯಂಚಾಲಿತ ಕಡೆ ಮನುಷ್ಯಚಾಲಿತ ವಿನಿಮಯ ಕೇಂದ್ರಗಳು ಬಳಕೆಯಲ್ಲಿವೆ.

	5 ಸ್ವಯಂಚಾಲಿತ ವಿನಿಮಯ ವ್ಯವಸ್ಥೆ:  ನಮಗೆ ಬೇಕಾದ ಉಪಕರಣದ ಸಂಖ್ಯೆಯನ್ನು ಮನುಷ್ಯಚಾಲಿತ ವಿನಿಮಯಕೇಂದ್ರಗಳಲ್ಲಿ ತಿಳಿಸಿ ದೂರವಾಣಿ ಪರಿಕರ್ಮಿಗಳ ಸಹಾಯದಿಂದ ಅದರೊಡನೆ ಸಂಪರ್ಕ ಸಾಧಿಸಬೇಕಿತ್ತು.  ಸ್ವಯಂಚಲಿತ ವ್ಯವಸ್ಥೆಯಲ್ಲಿ ಈ ಕಾರ್ಯವೆಲ್ಲವೂ ಟಪ್ಪೆ (ರಿಲೆ) ಎಂಬ ಸಾಧನದಿಂದ ಆಗುತ್ತದೆ.  ಮನುಷ್ಯಚಾಲಿತ ವಿನಿಮಯ ಕೇಂದ್ರದಲ್ಲಿದ್ದ ನ್ಯೂನತೆಗಳಾದ ವಿಧಾನ, ತಪ್ಪು ಸಂಪರ್ಕ ಬೆಳೆಸುವಿಕೆ ಮತ್ತು ರಹಸ್ಯ ಸಂಭಾಷಣೆಗಳ ಅಸಾಧ್ಯತೆಯನ್ನು ಸ್ವಯಂಚಲಿತ ವ್ಯವಸ್ಥೆ ತೊಡೆದುಹಾಕಿದೆ.  

ಚಿತ್ರ-10

ಇದನ್ನು ತಯಾರಿಸಿದವ ಅಮೆರಿಕದ ಎ.ಬಿ. ಸ್ಟ್ರೋಜರ್ ಎಂಬ ತಂತ್ರವಿದೆ.  ಹೀಗಾಗಿ ಇದಕ್ಕೆ ಸ್ಟ್ರೋಜರನ ವ್ಯವಸ್ಥೆ ಎಂಬ ಹೆಸರು ಬಂದಿದೆ.  ಇದರಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ಟಪ್ಪೆ ಅಥವಾ ಟಪ್ಪೆಗಳ ಗುಂಪಿನಿಂದಾದ ಸಾಧನಗಳ ಮೂಲಕ ನಡೆಯುತ್ತದೆ.  ಟಪ್ಪೆಗಳು ಒಂದು ಮಂಡಲದಲ್ಲಿ ಆಗುವ ವಿದ್ಯುತ್ ಚಲನೆಗಳ ಬದಲಾವಣೆಗಳ ಮೂಲಕ ಇತರ ಮಂಡಲಗಳಲ್ಲಿನ ಸಂಯೋಜನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತವೆ.

	ಟಪ್ಪೆ:  ಸ್ಥೂಲವಾಗಿ ಟಪ್ಪೆಗಳಲ್ಲಿ (ಚಿತ್ರ 10) ಒಂದು ಮೆದುಕಬ್ಬಿಣದ ತಿರುಳು ಇದೆ.  ಅದರ ಸುತ್ತ ಎನೇಮಲ್ ತಾಮ್ರದ ತಂತಿಯನ್ನು ಅನೇಕ ಸುತ್ತುಗಳಲ್ಲಿ ಉದ್ದಕ್ಕೂ ಸುತ್ತಿದೆ.  ಅದರ ಮೇಲೆ ಒಂದು ನೊಗವನ್ನೂ ಒಂದು ಆರ್ಮೆಚರನ್ನೂ ಜೋಡಿಸಿದೆ.  ಸುರುಳಿಯಲ್ಲಿ ವಿದ್ಯುತ್ತು ಸಂಚರಿಸಿದಾಗ ತಿರುಳಿನ ಸೆಳೆತದಿಂದ ಆರ್ಮೆಚರ್ ಚಲಿಸಿ ಅದಕ್ಕೆ ಸಿಕ್ಕಿಸಿರುವ ಹಿತ್ತಾಳೆ ಎತ್ತು ಕಡ್ಡಿಗಳ ಸಹಾಯದಿಂದ ನೊಗದ ಮೇಲೆ ಜೋಡಿಸಲಾಗಿರುವ ಸ್ಪರ್ಶಿಗಳುಳ್ಳ ಸ್ಪ್ರಿಂಗುಗಳನ್ನು  ಮೇಲಕ್ಕೆ ಎತ್ತುತ್ತವೆ.  ಪ್ರವಾಹ ಇಲ್ಲದಾಗ ಸ್ಪ್ರಿಂಗುಗಳು ಕೆಳಕ್ಕೆ ಬರುತ್ತವೆ.  ಹೀಗೆ ಸ್ಪ್ರಿಂಗುಗಳಿಗೆ ಸಿಕ್ಕಿಸಿರುವ ಸ್ಪರ್ಶ ಏರ್ಪಡುವುದಕ್ಕೂ ಬೇರ್ಪಡುವುದಕ್ಕೂ ನೇರವಾಗಿ ಟಪ್ಪೆಗೆ ಸೇರಿದಂತೆ ಇರುವ ಮಂಡಲಗಳಲ್ಲಿನ ಕೆಲಸಗಳನ್ನು ರೂಪಿಸುತ್ತವೆ.  ಬೇಕಾದ ಸಂಪರ್ಕವನ್ನು ಕಲ್ಪಿಸುತ್ತವೆ ಮತ್ತು ಬೇಡವಾದದ್ದನ್ನು ಬೇರ್ಪಡಿಸುತ್ತವೆ.

	ಸ್ಟ್ರೋಚರ್ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ.:  (1) ಫಲಕ.  ಇದು ದೂರವಾಣಿ ಉಪಕರಣದೊಳಗೇ ಅಡಕವಾಗಿದೆ.  ಇದರ ಕೆಲಸವನ್ನೂ ರಚನೆಯನ್ನೂ ಮೊದಲೇ ವಿವರಿಸಿದೆ.  (2) ಏಕವರಣಕಾರಿ (ಯೂನಿಸೆಲೆಕ್ಟರ್).  (3)  ವರಣಕಾರೀ ಸ್ವಿಚ್ ಯಾ ಬ್ಯಾಂಕ್ (4) ದ್ವಿಚಲನವರಣಕಾರಿ. ಇದರಲ್ಲಿ (ಚಿ) ಸಮುದಾಯವರಣಕಾರಿ ಮತ್ತು (b) ಅಂತಿಮವರಣಕಾರಿ ಇವೆ.  ದ್ವಿಚಲನವರಣಕಾರಿಗಳು ಅನೇಕ ಟಪ್ಪೆಗಳಿಂದಾಗಿವೆ.  ಇವೆಲ್ಲವೂ ವಿನಿಮಯ ಕೇಂದ್ರದಲ್ಲಿ ಇರುವ ಯಂತ್ರ ವ್ಯವಸ್ಥೆಗಳು.

	ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಚಂದಾದಾರನ ಉಪಕರಣದ ತಂತಿ ಮಾರ್ಗದ ತುದಿಯನ್ನೂ ವರಣಕಾರಿ ಸ್ವಿಚ್ಚಿನ ಒಂದು ಕೊನೆಗೆ (ಟರ್ಮಿನಲ್) ಸೇರಿಸಲಾಗಿದೆ.  ವರಣಕಾರಿ ಸ್ವಿಚ್ಚಿನಲ್ಲಿ (ಚಿತ್ರ 12)ರಲ್ಲಿ ತೋರಿಸಿರುವಂತೆ ಹತ್ತು ಮಟ್ಟದಲ್ಲಿ ಪ್ರತಿಯೊಂದು ಮಟ್ಟದಲ್ಲೂ 10 ಕೊನೆಗಳಿದ್ದು 100 ಉಪಕರಣಗಳನ್ನು ಸೇರಿಸಲು ಸಾಧ್ಯವಿದೆ.  ವರಣಕಾರಿ ಯಂತ್ರ ವ್ಯವಸ್ಥೆಗಳಲ್ಲಿ  ದ್ವಿಚಲನವರಣಕಾರಿಗಳನ್ನು ಇದಕ್ಕೆ ಜೋಡಿಸಲಾಗಿರುವುದು.  ದ್ವಿಚಲನವರಣಕಾರಿಯಲ್ಲಿ ತೊಡೆಕ (ವೈಪರ್) ಎಂಬ ಸ್ಪರ್ಶಿಭಾಗ ಉಂಟು.  ಇದು ಮೇಲಕ್ಕೆ ಮತ್ತು ಅರ್ಧ ವರ್ತುಲಾಕಾರದಲ್ಲಿ ಚಲಿಸಬಲ್ಲುದು.  ದ್ವಿಚಲನವರಣಕಾರಿಯನ್ನು ವರಣಕಾರೀ ಸ್ವಿಚ್ ಮುಂಭಾಗದಲ್ಲಿ ಜೋಡಿಸಿದಾಗ ತೊಡೆಕಕ್ಕೆ ತನ್ನ ಚಲನೆಯಿಂದ ವರಣಕಾರೀ ಸ್ವಿಚ್ಚಿನ 100 ಕೊನೆಗಳ ಪೈಕಿ ಯಾವುದರ ಜೊತೆ ಬೇಕಾದರೂ ಸ್ಪರ್ಶ ಏರ್ಪಡುವುದು ಸಾಧ್ಯ.  ಈ ರೀತಿಯಾಗಿ ವಿನಿಮಯ ಕೇಂದ್ರದಲ್ಲಿ ಅನೇಕ ವರಣಕಾರೀ ಸ್ವಿಚ್ಚುಗಳನ್ನೂ ವರಣಕಾರೀ ಯಂತ್ರಗಳನ್ನೂ ಜೋಡಿಸಿ ಹಲವಾರು ಉಪಕರಣಗಳಿಗೆ ಸೌಲಭ್ಯ ಒದಗಿಸಬಹುದು.

ಚಿತ್ರ-12

	ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಒಬ್ಬ ಚಂದಾದಾರ ಉಪಕರಣದ ಮೇಲಿನ ಹಸ್ತವಾರವನ್ನು ಕೈಗೆ ತೆಗೆದುಕೊಂಡ ಕೂಡಲೇ ಆತನ ಉಪಕರಣ ಕೇಂದ್ರ ಕಚೇರಿಯ ಒಂದು ಟಪ್ಪೆಯೊಡನೆ ಸಂಪರ್ಕ ಬೆಳೆಸುತ್ತದೆ.  ಟಪ್ಪೆ ಕೆಲಸ ಮಾಡಿ ಪ್ರೇಷಕಕ್ಕೆ ಬೇಕಾದ ವಿದ್ಯುತ್ತನ್ನು ಒದಗಿಸಿ ಉಪಕರಣವನ್ನು ಏಕವರಣಕಾರಿಗೆ ಸೇರಿಸುತ್ತದೆ.  ಇದು ಉಪಕರಣಕ್ಕೂ ವರಣಕಾರಿ ಯಂತ್ರವಿನ್ಯಾಸಕ್ಕೂ (ಸೆಲೆಕ್ಟರ್ ಮೆಕ್ಯಾನಿಸಮ್) ಸಂಪರ್ಕ ಕಲ್ಪಿಸುತ್ತದೆ.  ಏಕವರಣಕಾರಿ ಈ ಸಂಪರ್ಕವನ್ನು ಸಾಧಿಸುತ್ತಲೇ ಫಲಕನಾದ ಉಪಕರಣಕ್ಕೆ ಬಂದು ಚಂದಾದಾರ ಫಲಕ ತಿರುಗಿಸಬಹುದೆಂಬ ಸೂಚನೆಯನ್ನು ಕೊಡುತ್ತದೆ.

ಚಿತ್ರ-13

ಚಂದಾದಾರನಿಗೆ ಬೇಕಾದ ಉಪಕರಣದ  ಸಂಖ್ಯೆ 599 ಎಂದು ಭಾವಿಸೋಣ.  ಇದರ ಮೊದಲ ಅಂಕೆಯಾದ 5ರಲ್ಲಿ ಬೆರಳನ್ನಿಟ್ಟು ಫಲಕವನ್ನು ತಿರುಗಿಸಿದ ಒಡನೆ ಮೊದಲೇ ವಿವರಿಸಿರುವಂತೆ ಫಲಕ 5 ಸ್ಪಂದನಗಳನ್ನು ಸಮುದಾಯ ವರಣಕಾರಿಗೆ ತಲುಪಿಸುತ್ತದೆ.  ಆಗ ಅದು ಐದು ಮಟ್ಟ ಮೇಲಕ್ಕೆ ಹೋಗಿ ಅಲ್ಲಿ ಹತ್ತು ಕೊನೆಗಳ ಪೈಕಿ ಯಾವುದು ಬಿಡುವಾಗಿದೆಯೋ ಅದರೊಡನೆ ಸ್ಪರ್ಶವೇರ್ಪಡಿಸುತ್ತದೆ.  (ಆ ಮಟ್ಟದಲ್ಲಿರುವ ಹತ್ತು ಕೊನೆಗಳಲ್ಲಿ ಪ್ರತಿಯೊಂದೂ 5 ಅಂಕೆ ಮೊದಲನೆ ಸಂಖ್ಯೆ ಆಗಿರುವ ಅಂದರೆ 500-599 ಸಂಖ್ಯೆಗಳ ಉಪಕರಣಗಳೊಡನೆ ಸಂಪರ್ಕ ಸಾಧಿಸಬಲ್ಲುದು).  ಚಂದಾದಾರ ಎರಡನೆಯ ಅಂಕೆಯಾದ 9ನ್ನು ಮೊದಲಿನಂತೆ ಫಲಕ ತಿರುಗಿಸಿದಾಗ ಒಡನೆ 9 ಸ್ಪಂದನಗಳು ಅಂತಿಮ ವರಣಕಾರಿಗೆ ಹೋಗುತ್ತವೆ.  ಅಲ್ಲಿನ ತೊಡೆಕ 9ನೆಯ ಮಟ್ಟಕ್ಕೆ ಏರಿ ಅಲ್ಲಿ ಕಾದು ನಿಲ್ಲುತ್ತದೆ.  ಮೂರನೆಯ ಅಂಕೆಯಾದ 9ನ್ನು ಪುನಃ ಫಲಕ ತಿರುಗಿಸಿದಾಗ ತೊಡೆಕ ವರ್ತುಲಾಕಾರದ ಪಥದಲ್ಲಿ ಚಲಿಸಿ ಆ ಮಟ್ಟದಲ್ಲಿನ 9ನೆಯ ಕೊನೆಯೊಡನೆ ಸ್ಪರ್ಶವೇರ್ಪಡಿಸಿ 599 ಸಂಖ್ಯೆ ಉಪಕರಣದೊಡನೆ ಸಂಪರ್ಕ ಸಾಧಿಸುತ್ತದೆ (ಚಿತ್ರ 12ರಲ್ಲಿ ಮೇಲೆ ವಿವರಿಸಿರುವ ಕೆಲಸವನ್ನು ಸ್ಥೂಲವಾಗಿ ವಿವರಿಸಿದೆ.).  ಆಗ ಇನ್ನೊಂದು ಟಪ್ಪೆ ಕೆಲಸಮಾಡಿ 599 ಸಂಖ್ಯೆಯ ಉಪಕರಣದಲ್ಲಿನ ಗಂಟೆ ಬಾಜಿಸುತ್ತದೆ.  ಹೀಗಲ್ಲದೆ ಅದು ಕ್ರಿಯೆಯಲ್ಲಿದ್ದರೆ ಇನ್ನೊಂದು ಟಪ್ಪೆ ಉಪಕರಣದ ಬಿಡುವಾಗಿಲ್ಲದ ಸೂಚನೆಯನ್ನು ಕೊಡುತ್ತದೆ.  (ಕ್ರಿಯೋದ್ಯುಕ್ತನಾದ-ಎನ್‍ಗೇಜ್‍ಡ ಸೌಂಡ್).

	6 ಕ್ರಾಸ್‍ಬರ್ ವಿನಿಮಯ ಕೇಂದ್ರ:  ಸ್ವಯಂಚಾಲಿತ ವ್ವವಸ್ಥೆಗಳಲ್ಲಿ ಉಪಯೋಗದಲ್ಲಿರುವ ಇನ್ನೊಂದು ವಿಧವಿದು.  ಇಂದಿನ ಸ್ವಯಂಚಾಲಿತ ವ್ಯವಸ್ಥೆಯ ಪ್ರಮುಖ ಮುಖ ಸುದೂರ ಸಂಪರ್ಕ ಸಾಧನೆ.  ಇದು ದಸ್ಸಾಧ್ಯವೇ ಎನಿಸಿತ್ತು.  ಮನುಷ್ಯವಾಣಿ ಸರಿಯಾಗಿ ಕೇಳಿಸದೆ ತುಂಬ ತೊಂದರೆ ಆಗುತ್ತಿತ್ತು.  ಸ್ಟ್ರೋಜರ್ ಸ್ವಿಚಿಂಗ್‍ಯಂತ್ರ ವ್ಯವಸ್ಥೆಯಲ್ಲಿನ ಶಬ್ದಕ್ಕೆ ಸ್ವಿಚಿಂಗ್ ಗಲಭೆ ಎಂದು ಹೆಸರು.  ಇದಕ್ಕೆ ಕಾರಣ ಆ ವ್ಯವಸ್ಥೆಯಲ್ಲಿನ ಯಂತ್ರಗಳ ಚಲನೆ.  ಈ ಗಲಭೆಯ ಜೊತೆಗೆ ಅಸಮರ್ಪಕ ಸ್ಪರ್ಶ ಏರ್ಪಡುವುದರಿಂದ ಉಂಟಾದ ಗಲಭೆಯೂ ಸೇರಿ ದೂರಸಂಪರ್ಕಕ್ಕೆ ತೊಂದರೆಯಾಗಿತ್ತು.  ಇದನ್ನು ಕ್ರಾಸ್‍ಬಾರ್ (ಅಡ್ಡಕಂಬಿ) ವ್ಯವಸ್ಥೆಯಲ್ಲಿ ತೊಡೆದುಹಾಕಿದೆ.  ಕಾಸ್‍ಬಾರಿನ ಇನ್ನೊಂದು ಮುಖ್ಯ ಅನುಕೂಲತೆ ವಾಕ್‍ಪಥ ಮತ್ತು ನಿಯಂತ್ರಣ ಪಥಗಳು ಸ್ವತಂತ್ರವಾಗಿರುವುದು.  ಇದರಿಂದ ಚಂದಾದಾರರಿಬ್ಬರಲ್ಲಿ ಸಂಭಾಷಣೆ ಪ್ರಾರಂಭವಾದ ಕೂಡಲೇ ನಿಯಂತ್ರಣಪಥದ ವ್ಯವಸ್ಥೆಗಳು ಬಿಡುವಾಗಿ ಬೇರೆ ವಾಕ್‍ಪಥವನ್ನು ಕಲ್ಪಿಸುವುದರಲ್ಲಿ ತೊಡಗಬಹುದು.  ಸ್ಟ್ರೋಜರ್ ವ್ಯವಸ್ಥೆಯಲ್ಲಿ ಒಂದು ಸಂಪರ್ಕ ಏರ್ಪಟ್ಟ ಬಳಿಕ ಸಂಭಾಷಣೆ ಮುಗಿಯುವ ತನಕ ಅದಕ್ಕೆ ಸಂಬಂಧಪಟ್ಟ ಯಂತ್ರ ವ್ಯವಸ್ಥೆಗಳ ಭಾಗಗಳು ಬೇರೆ ಕೆಲಸ ಮಾಡಲು ಸಾಧ್ಯವಾಗದು.  ಕ್ರಾಸ್‍ಬಾರ್ ವ್ಯವಸ್ಥೆಯ ಇತರ ಅನುಕೂಲತೆಗಳೆಂದರೆ ಇದು ನಂಬಿಕೆಗೆ ಅರ್ಹವಾಗಿದೆ.  ಕಡಿಮೆ ಜಾಗ ಆಕ್ರಮಿಸುವುದು ಮತ್ತು ಅದನ್ನು ಕಾಪಾಡಿಕೊಂಡು ಬರುವುದು ಸುಲಭ.

	1948ರಿಂದೀಚೆಗೆ, ಟ್ರಾನ್ಸಿಸ್ಟರಿನ ಉಪಜ್ಞೆ ಆದ ಬಳಿಕ, ಪ್ರೇಷಣ ವ್ಯವಸ್ಥೆಯಲ್ಲಿ ಹೊಸ ವಿಧಾನಗಳು ಬರಲಾರಂಭಿಸಿವೆ.  ಸೆಕೆಂಡಿನ ಹತ್ತುಲಕ್ಷದ ಒಂದನೆಯ (1/10.00.000) ಕಾಲದಲ್ಲಿ ಎರಡು ಉಪಕರಣಗಳ ನಡುವೆ ಸಂಪರ್ಕ ಬೆಳೆಸಬಹುದಾದಂಥ ವಿಧಾನಗಳು ಬಳಕೆಗೆ ಬರುತ್ತಲಿವೆ.  ಪ್ರಸಕ್ತ ಶತಮಾನದ ಕಡೆಯ ವೇಳೆಗೆ ಅತಿಶೀಘ್ರವಾಗಿ ಸಂಪರ್ಕ ಬೆಳೆಸಲು ಅನುಕೂಲವಾಗುವಂತೆ ಎಲೆಕ್ಟ್ರಾನಿಕ್ ವಿನಿಮಯ ಕೇಂದ್ರಗಳು ಅನೇಕ ದೇಶಗಳಲ್ಲಿ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುವ ಸಾಧ್ಯತೆ ಉಂಟು.

	7  ದೂರವಾಣಿ ಮಾರ್ಗಗಳು:  ಇವು ಚಿರಪರಿಚಿತ ತಂತಿ ಮಾರ್ಗಗಳು.  ಒಂದು ಉಪಕರಣವನ್ನು ಇನ್ನೊಂದರೊಡನೆ ಸೇರಿಸುವುದಕ್ಕೂ ಬೇರೆ ಬೇರೆ ಉಪಕರಣಗಳನ್ನು ಕೇಂದ್ರ ಕಚೇರಿಯಲ್ಲಿನ ಯಂತ್ರ ವ್ಯವಸ್ಥೆಗಳಿಗೆ ಸೇರಿಸುವುದಕ್ಕೂ ಇವು ಅನುಕೂಲತೆ ಕಲ್ಪಿಸುತ್ತವೆ.  ತಂತಿಗಳಲ್ಲಿ ಎರಡು ಬಗೆಗಳುಂಟು.  ಒಂದು ಸಾಧಾರಣ ತಾಮ್ರದ ತಂತಿಗಳು, ಇನ್ನೊಂದು ರೋಧ ಹೊದಿಕೆ ಇರುವ ತಿರುಚಿತ ತಾಮ್ರದ ತಂತಿಗಳು; ಇವಕ್ಕೆ ಸಾಧಾರಣವಾಗಿ ಮೇಲು ಹೊದಿಕೆ ಇರುವುದು.  ಇವುಗಳಿಗೆ ಹೊರಜಿಗಳೆಂದು ಹೆಸರು.  ದೂರವಾಣಿ ಬಳಕೆಗೆ ಬಂದ ಮೊದಲಲ್ಲಿ ಕಬ್ಬಿಣದ ತಂತಿಗಳನ್ನು ಈ ಮಾರ್ಗಗಳಿಗೆ ಉಪಯೋಗಿಸುತ್ತಿದ್ದರು.  ಅಲ್ಲಲ್ಲಿ ಕಬ್ಬಿಣದ ಕಂಬಗಳನ್ನು ನೆಟ್ಟು ಎತ್ತರದಲ್ಲಿ ಕಂಬಗಳ ಮೇಲೆ ಅಡ್ಡಪಟ್ಟಿಗಳಿಗೆ ತಂತಿಗಳನ್ನು ಎಳೆಯುತ್ತಿದ್ದರು.  ಇದನ್ನು ತಪ್ಪಿಸಿ ಸಮರ್ಥವಾದ ಉಕ್ಕು ಮತ್ತು ತಾಮ್ರದ ತಂತಿಗಳು ಕ್ರಮೇಣ ಬಳಕೆಗೆ ಬಂದುವು.  ಕೇಳುವುದರಲ್ಲಿ ಅಡಚಣೆ ಇಲ್ಲದಂತೆ ಮಾಡಲು ಮತ್ತು ಸ್ಪಷ್ಟವಾಗಿ ಕೇಳುವಂತೆ ಮಾಡಲು ಒಂದೇ ತಂತಿಯ ಬದಲು ಎರಡು ತಂತಿಗಳನ್ನು ಉಪಯೋಗಿಸಿ ಅದನ್ನು ಉತ್ತಮಪಡಿಸಿದರು.

	ದೂರವಾಣಿಯ ಬಳಕೆ ಹೆಚ್ಚಾದಂತೆಲ್ಲ ಪಟ್ಟಣಗಳಲ್ಲಿ ಕಂಬಗಳ ಮೇಲೆ ಅನೇಕ ತಂತಿಗಳು ತೂಗಾಡುತ್ತಿರುವುದು ಅಸಹ್ಯವಾಗಿ ಕಂಡುಬಂದದ್ದರಿಂದಲೂ ಅವುಗಳಿಂದ ವಾಹನ ಸಂಚಾರಗಳಿಗೆ ಅಡಚಣೆ ಉಂಟಾಗುತ್ತಿದ್ದುದರಿಂದಲೂ ಗಾಳಿ ಜೋರಾಗಿ ಬೀಸಿದಾಗ ತಂತಿಗಳು ಕಡಿದು ಸಂಪರ್ಕವ್ಯವಸ್ಥೆ ಕೆಡುತ್ತಿದ್ದುದರಿಂದಲೂ ಕ್ರಮೇಣ ಇದನ್ನು ಕೈಬಿಡಬೇಕಾಯಿತು.  ಈಗ ಹೆಚ್ಚು ಹೆಚ್ಚಾಗಿ ಭೂಮ್ಯಂತರ್ಗತ ಹೊರಜಿಗಳ ನೆರವಿನಿಂದ ದೂರವಾಣಿ ಮಾರ್ಗರಚನೆ ಬಳಕೆಗೆ ಬರುತ್ತಿದೆ.  ಇದರಲ್ಲೂ ಬೇರೆ ಬೇರೆ ವಿಧವಾದ ಹೊರಜಿಗಳು ಬಳಕೆಯಲ್ಲಿವೆ.  ಅರೆದ ಕಾಗದದ ಮಡ್ಡಿಯಲ್ಲಿ ಅದ್ದಿದ ತಂತಿಗಳು ಬಳಕೆಯಲ್ಲಿವೆ.  ಈ ಹೊರಜಿಗಳು ಕೆಲವು ವೇಳೆ 2.625 ವ್ಯಾಸವುಳ್ಳದ್ದಾಗಿದ್ದು ಸಾವಿರಾರು ತಂತಿಗಳನ್ನು ಒಳಗೊಂಡಿರುತ್ತವೆ. ಈಚೆಗೆ ವಿದ್ಯುತ್‍ರೋಧ ವಸ್ತುವಾಗಿ ಪ್ಲಾಸ್ಟಿಕ್ಕಿನ ಬಳಕೆ ಹೆಚ್ಚಾಗುತ್ತಿದೆ.

	8  ಸುದೂರಪ್ರೇಷಣ:  ದೂರವಾಣಿಯನ್ನು ಉಪಜ್ಞಿಸಿ ಅನೇಕ ವರ್ಷಗಳಾದ ಮೇಲೂ ಕೆಲವು ನೂರು ಮೈಲುಗಳಿಗಿಂತ ಹೆಚ್ಚು ದೂರಕ್ಕೆ ಮನುಷ್ಯವಾಣಿಯನ್ನು ಪ್ರೇಷಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.  ಒಂದು ಕಾಲದಲ್ಲಿ ಇದು ಅಸಾಧ್ಯವಾಗಿಯೇ ತೋರಿತ್ತು.  ಸ್ವಲ್ಪ ದೂರಪ್ರೇಷಣದಲ್ಲಿ ಕೂಡ ಅನೇಕ ನ್ಯೂನತೆಗಳಿದ್ದು ಮತ್ತು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ.  ಸಾಧಾರಣವಾಗಿ ಮಾತಾಡಿದಾಗ ಉತ್ಪತ್ತಿಯಾದ ಶಬ್ದ ತರಂಗಗಳು, ಒಂದಾದ ಮೇಲೊಂದು ಬರುವ ಕ್ರಮದಿಂದ ಮತ್ತು ಕಡಿಮೆ ಹಾಗೂ ಅಧಿಕ ಆವರ್ತಾಂಕಿಗಳ ಮಧುರ ಸಮ್ಮಿಲನದಿಂದ ಒಂದೊಂದು ಪದವನ್ನೂ ಸ್ಪಷ್ಟವಾಗಿ ಕೇಳುತ್ತೇವೆ.  ಇದರಲ್ಲೇನಾದರೂ ವ್ಯತ್ಯಾಸವಾಗಿ ಕೆಲವು ಆವರ್ತಾಂಕ ಅಧಿಕ ಮತ್ತೆ ಕೆಲವು ಕಡಿಮೆ ಆಗಿ ಅದರ ಕ್ರಮದಲ್ಲೂ ವ್ಯತ್ಯಾಸವಾದರೆ ವಾಣಿ ಸರಿಯಾಗಿರದೆ ಮತ್ತು ಪದಗಳು ಗೊತ್ತಾಗದೆ ಕೇಳುವುದು ಕಷ್ಟವಾಗುತ್ತದೆ.  ಹೀಗೆ ಆವರ್ತಾಂಲಕವಿಕೃತಿ ಸುದೂರಪ್ರೇಷಣದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿತ್ತು.  ತಂತಿಗಳಲ್ಲಿ ಧ್ವನಿ ಪ್ರವಾಹ ದೂರ ಹೋಗುವಾಗ ಉಚ್ಚಾವರ್ತಾಂಕಗಳು ನಿಮ್ನಾವರ್ತಾಂಕಗಳಿಗಿಂತ ಬೇಗ ದುರ್ಬಲಗೊಳ್ಳುತ್ತಿದ್ದುವು.  ಧ್ವನಿ ಪ್ರವಾಹಗಳು ಅಭಿಗ್ರಾಹಕ ಪೊರೆಯನ್ನು ಪ್ರಚೋದಿಸಲು ಸಮರ್ಥವಾಗಿರದೆ ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ.  ಅನೇಕ ಪ್ರಯೋಗಗಳನ್ನು ನಡೆಸಿದ ಮೇಲೆ 1899ರಲ್ಲಿ ಮೈಕೇಲ್ ಐಪ್ಯೂತಿನ್ ಮತ್ತು ಎ. ಕ್ಯಾಪ್‍ಬೆಲ್ ಎಂಬುವರು ಬೇರೆ ಬೇರೆಯಾಗಿ ಕೆಲಸಮಾಡಿ ಒಂದೇ ವೇಳೆ ಇದಕ್ಕೆ ಪರಿಹಾರ ಸೂಚಿಸಿದರು.  ಇದೇ ಹೊರೆಗೂಡುವ ಸುರುಳಿಗಳು (ಲೋಡಿಂಗ್ ಕಾಯಿಲ್ಸ್).  ದೂರವಾಣಿ ಮಾರ್ಗದಲ್ಲಿ ಈ ಸುರುಳಿಗಳನ್ನು ನಿಯಮಿತ ದೂರದಲ್ಲಿ ಸೇರಿಸುವುದರಿಂದ ಧ್ವನಿಪ್ರವಾಹ ದುರ್ಬಲಗೊಳ್ಳದೆ ಸರಿಯಾಗಿ ಕೇಳಲು ಅನುಕೂಲವಾಯಿತು.  ಆದರೆ ಇದೂ ಸಾಲದೆ ಹೋಯಿತು.  ಇನ್ನೂ ಹೆಚ್ಚು ದೂರಕ್ಕೆ ಧ್ವನಿಪ್ರವಾಹವನ್ನು ಕಳುಹಿಸುವುದರಲ್ಲಿ ತೊಂದರೆ ಇದ್ದೇ ಇತ್ತು.  ಅದಕ್ಕಾಗಿ ಯಾಂತ್ರಿಕ ಪುನರಾವರ್ತಕ (ಮೆಕ್ಯಾನಿಕಲ್ ರಿಪೀಟರ್) ಎಂಬ ಸಾಧನವನ್ನೂ ಅನಂತರ ಎಲೆಕ್ಟ್ರಾನುಗಳಿಗೆ ಪ್ರವರ್ಧಕಗಳನ್ನೂ ಉಪಯೋಗಿಸಲಾಯಿತು.  ಇವು ಸಮುದ್ರದಾಚೆ ಖಂಡದಿಂದ ಖಂಡಗಳಿಗೆ ದೂರವಾಣಿ ಪ್ರೇಷಣಕ್ಕೆ ಅನುಕೂಲಮಾಡಿವೆ.

	9  ವಾಹಕ ದೂರವಾಣಿ (ಕ್ಯಾರಿಯರ್ ಟೆಲಿಫೊನಿ):  ಸುದೂರ ಸಂಪರ್ಕ ತಂತಿಮಾರ್ಗಗಳು ವಾರ್ತೆಗಳನ್ನು ಹೊತ್ತು ತಲುಪಿಸುವ ಸಾಮಥ್ರ್ಯವನ್ನು ವರ್ಧಿಸುವ ಸಲುವಾಗಿ ಒಂದೇ ಜೊತೆ ತಂತಿಗಳ ಮೂಲಕ ಏಕಕಾಲದಲ್ಲಿ ಅನೇಕ ವಾರ್ತೆಗಳನ್ನು ಕಳುಹಿಸಿದ ಬಹುಪಥ ದೂರವಾಣಿ (ಮಲ್ಟಿಪ್ಲೆಕ್ಸ್ ಟೆಲಿಫೊನಿ) ಎಂಬ ವ್ಯವಸ್ಥೆ ಅಭಿವೃದ್ಧಿಗೆ ಬಂದಿತು.  ಈ ವಿಧಾನವನ್ನು ವ್ಯಾಪಾರದ ದೃಷ್ಟಿಯಿಂದ 1918ರಲ್ಲಿ ಅಮೆರಿಕದಲ್ಲಿ ಪ್ರಾರಂಭಿಸಿದರು.  ಇದೇ ವಾಹಕ ದೂರವಾಣಿ.  ಶಬ್ದತರಂಗಗಳು ಬೇರೆ ಬೇರೆ ಆವರ್ತಾಂಕಗಳಿರುವ ಕಂಪನಗಳನ್ನು ಏಕಕಾಲದಲ್ಲಿ ಯಾವ ರೀತಿ ಹೊತ್ತು ಸಾಗುವುವೋ ಅದೇ ರೀತಿ ಮಂಡಲಗಳು ಸಹ ಒಂದೊಂದೂ ಭಿನ್ನವಾದ ಆವರ್ತಾಂಕಗಳಿರುವ ಅನೇಕ ಪ್ರವಾಹಗಳನ್ನು ಒಳಗೊಂಡಿರುವ ತೊಡಕಾದ ಪರ್ಯಾಯ ಪ್ರವಾಹವನ್ನು ಹೊತ್ತು ಸಾಗಬಹುದು.  ವಾಹಕ ವ್ಯವಸ್ಥೆಯಲ್ಲಿ ಈ ವಿಧವಾದ ಪ್ರತಿಯೊಂದು ಪ್ರವಾಹಕ್ಕೂ ಎರಡು ಭಾಗಗಳು ಉಂಟು.  ಒಂದು ವಾಹಕ, ಇನ್ನೊಂದು ಧ್ವನಿಪ್ರವಾಹ.  ಧ್ವನಿಪ್ರವಾಹ ಯಾವುದಾದರೂ ಒಬ್ಬ ಚಂದಾದಾರನ ಪ್ರೇಷಕದಿಂದ ಬಂದದ್ದು.  ವಾಹಕವಾದರೊ ಎಲೆಕ್ಟ್ರಾನಿಕ್ ಆಂದೋಳಕ ಎಂಬ ಸಾಧನದಿಂದ ಬಂದದ್ದು.  ಇದು ಅಧಿಕ ಆವರ್ತಾಂಕಗಳಿರುವ ವಾಹಕ ಪ್ರವಾಹದೊಡನೆ ಸಂಯೋಜಿಸಿ ಒಂದೇ ಹೊರಜಿಯ ಮುಖಾಂತರ ಪ್ರೇಷಣ ಮಾಡಬಹುದು.  ಪ್ರತಿಯೊಂದು ಆವರ್ತಾಂಕವೂ ಅದರೊಡನೆ ಸಂಯೋಜಿತವಾಗಿರತಕ್ಕ ಧ್ವನಿ ಪ್ರವಾಹವನ್ನು ಗುರುತಿಸಲು ಅನುಕೂಲ ಮಾಡುತ್ತದೆ.  ಮಾರ್ಗದ ತುದಿಯಲ್ಲಿ ಸೋಸುಕ (ಫಿಲ್ಟರು) ಎಂಬ ಸಾಧನ ಹೊರಜಿಯ ಮೂಲಕ ಬಂದ ಕರೆಗಳನ್ನು ವಾಹಕಗಳಿಗೆ ಅನುಗುಣವಾಗಿ ಗುರುತಿಸಿ ಸರಿಯಾದ ಮಾರ್ಗಗಳಲ್ಲಿ ಅವನ್ನು ರವಾನಿಸುತ್ತದೆ.  ಕಡೆಯಲ್ಲಿ ಅಭಿಗ್ರಾಹಕಕ್ಕೆ ಅವನ್ನು ತಲುಪಿಸುವುದಕ್ಕೆ ಮುಂಚೆ ವಿಮೂರ್ಛನಕಾರಿ (ಡಿಮಾಡ್ಯುಲೇಟೆರ್) ಎಂಬ ಸಾಧನ ವಾಹಕಾವರ್ತಾಂಕಗಳನ್ನು ಅಡಗಿಸಿ ಧ್ವನಿಪ್ರವಾಹಗಳನ್ನು ಮಾತ್ರ ಬಿಡುತ್ತದೆ.  ವಾಹಕ ದೂರವಾಣಿ ಸುದೂರ ಪ್ರೇಷಣದಲ್ಲಿ ಬಹು ಪರಿಣಾಮಕಾರಿಯಾದ ಅಭಿವೃದ್ಧಿಗೆ ಸಹಾಯ ಮಾಡಿದೆ.

	ಸೂಕ್ಷ್ಮ ತರಂಗ ರೇಡಿಯೊ ಟಪ್ಪೆ ವ್ಯವಸ್ಥೆ ಸುದೂರ ಪ್ರೇಷಣದಲ್ಲಿ ಉಪಯೋಗಿಸುತ್ತಿರುವ ಇನ್ನೊಂದು ವಿಧಾನ.  ಇದರಲ್ಲಿ ದೂರ ದೂರದಲ್ಲಿ ಪ್ರಸಾರ ಗೋಪುರಗಳು ಅಥವಾ ರೇಡಿಯೊ ಟಪ್ಪೆ ಗೋಪುರಗಳು ಇದ್ದು ಅನೇಕ ಸಾವಿರ ಮೆಗಸೈಕಲ್ ಆವರ್ತಾಂಕಗಳಿರುವ ಪ್ರಸಾರತರಂಗಗಳನ್ನು ಒಂದು ಗೋಪುರದಿಂದ ಇನ್ನೊಂದಕ್ಕೆ ಪ್ರೇಷಣ ಮಾಡಲಾಗುತ್ತದೆ.  ಇಂಥ ಪ್ರತಿಯೊಂದು ಠಾಣೆಯಿಂದಲೂ ಸಂಜ್ಞೆಗಳನ್ನು ಪ್ರವರ್ಧಿಸಿ ಮುಂದಿನ ಠಾಣೆಗೆ ಪ್ರೇಷಿಸಲಾಗುವುದು.  ಈ ವಿಧಾನದಿಂದ  ಒಂದೇ ಮಾರ್ಗದಲ್ಲಿ ಸುಮಾರು 600 ಸಂಭಾಷಣೆಗಳನ್ನು ಏಕಕಾಲದಲ್ಲಿ ಒಯ್ಯಬಹುದು.  ಮೇಲಿನ ಎರಡು ವ್ಯವಸ್ಥೆಗಳೂ ಅಂತರನಗರ ನೇರಸಂಪರ್ಕಕ್ಕೆ ತುಂಬ ಅನುಕೂಲ್ಯ ಒದಗಿಸಿವೆ.

	10  ಭಾರತದಲ್ಲಿ ದೂರವಾಣಿ:  ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಬಿಟ್ಟು ಪ್ರಪಂಚದ ಬೇರೆ ಎಲ್ಲ ದೇಶಗಳಲ್ಲಿಯೂ ದೂರವಾಣಿ ವಿನಿಮಯ ಕೇಂದ್ರ, ಹಂಚಿಕೆ ವ್ಯವಸ್ಥೆ ಮುಂತಾದವೆಲ್ಲವೂ ಆಯಾ ದೇಶದ ಸರ್ಕಾರದ ವಶದಲ್ಲಿಯೇ ಇವೆ.  ಆದರೆ ಅವುಗಳ ತಯಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ರ ಕೆಲವು ಕಡೆ ಸರ್ಕಾರದ ಅಧೀನದಲ್ಲಿಯೂ ಕೆಲವು ಕಡೆ ಖಾಸಗೀ ಸಂಸ್ಥೆಗಳ ವಶದಲ್ಲಿಯೂ ಉಂಟು.  ಭಾರತದಲ್ಲಿ ದೂರವಾಣಿ ವ್ಯವಸ್ಥೆ ಮತ್ತು ಅವುಗಳ ಉತ್ಪಾದನೆ ಸರ್ಕಾರದ ಕ್ಷೇತ್ರದಲ್ಲಿ ಇದೆ.  ಈ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇಲ್ಲಿ ಸಂಪರ್ಕಸಾಧನವ್ಯವಸ್ಥೆ ಸಮರ್ಪಕವಾಗಿರಲಿಲ್ಲ.  ಇದ್ದ ಅಲ್ಪಸ್ವಲ್ಪ ಸಾಧನ ಮತ್ತು ಉಪಕರಣಗಳೆಲ್ಲವೂ ಆಮದು ಮಾಡಿಕೊಂಡವೇ ಆಗಿದ್ದುವು.  ಇವನ್ನು ಆದಷ್ಟು ಜಾಗ್ರತೆ ಉತ್ತಮಗೊಳಿಸಲು ಹಾಗೂ ಸಂಪರ್ಕಸಾಧನಗಳನ್ನು ದೇಶದಲ್ಲಿಯೇ ತಯಾರಿಸಲು ಸರ್ಕಾರೀ ಕ್ಷೇತ್ರದಲ್ಲಿ ದೂರವಾಣಿ ಕಾರ್ಖಾನೆಯನ್ನು (ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್) ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. (1948).  ದೂರವಾಣಿ ಉಪಕರಣಗಳನ್ನೂ ಸ್ವಯಂಚಾಲಿತ ದೂರವಾಣಿ ಕೇಂದ್ರದಲ್ಲಿನ ಯಂತ್ರ ವ್ಯವಸ್ಥೆಗಳನ್ನೂ ಈ ಕಾರ್ಖಾನೆಯಲ್ಲಿ ತಯಾರಿಸಲು ಪ್ರಾರಂಭಿಸಿದಾಗ ಬಿಡಿಭಾಗಗಳನ್ನು ಇಂಗ್ಲೆಂಡಿನ ಆಟೊಮ್ಯಾಟಿಕ್ ಟೆಲಿಫೋನ್ ಅಂಡ್ ಎಲೆಕ್ಟ್ರಿಕ್ ಕಂಪನಿಯವರ ನೆರವಿನೊಡನೆ ತರಿಸಿಕೊಂಡು ಜೋಡಣೆಯ ಕೆಲಸವನ್ನು ಮಾತ್ರ ಮಾಡಲಾಗುತ್ತಿತ್ತು.  ಆಗ ಚಿಕ್ಕದಾಗಿ ಪ್ರಾರಂಭಿಸಿದ ಕಾರ್ಖಾನೆ ಈಗ (1977) ಒಂಬತ್ತು ಘಟಕಗಳನ್ನು ಒಳಗೊಂಡು ಸುಮಾರು 23.000 ಕೆಲಸಗಾರರಿರುವ ಬೃಹತ್ಕಾರ್ಖಾನೆಯಾಗಿ ಬೆಳೆದಿದೆ.  ಇಂದು ಐ.ಟಿ.ಐ.ಯ ವಾರ್ಷಿಕ ಉತ್ಪಾದನೆ ಸುಮಾರು 100 ಕೋಟಿ ರೂಪಾಯಿಗಳು.  ಇಲ್ಲಿ ದೂರ ಸಂಪರ್ಕದ ಎಲ್ಲ ಉಪಕರಣಗಳನ್ನೂ ಉತ್ಪಾದಿಸಲಾಗುತ್ತಿದೆ.  ಸ್ಟ್ರೋಜರ್ ಹಾಗೂ ಕ್ರಾಸ್‍ಬಾರ್ ಸ್ವಯಂಚಾಲಿತ ದೂರವಾಣಿ ವಿನಿಮಯ ಸಾಧನ.  ವಿವಿಧ ವಿನ್ಯಾಸದ ದೂರವಾಣಿಗಳು, ದೂರ ಪ್ರೇಷಣ ಮತ್ತು ನೇರ ಸಂಪರ್ಕ ಕಾರ್ಯಾಚರಣೆಗೆ ಬೇಕಾಗುವ ಸಹಾಕ್ಷೀಯ (ಕೊಆ್ಯಕ್ಸಿಯಲ್) ಮತ್ತು ಸೂಕ್ಷ್ಮ ತರಂಗಪ್ರಸಾರ ಸಲಕರಣೆಗಳು ಅಲ್ಲದೆ ರೇಲ್ವೆ ರಕ್ಷಣಾ ವಿಭಾಗ, ವಿದ್ಯುತ್ ಮಂಡಲಿ ಹಾಗೂ ರಸ್ತೆಸಾರಿಗೆ ನಿಯಂತ್ರಣಕ್ಕೆ ಬೇಕಾಗುವ ಉಪಕರಣಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ.  ಅಲ್ಲದೆ ಸತತ ಸಂಶೋಧನ ಪರಿಶ್ರಮದ ಫಲವಾಗಿ ವಿವಿಧ ಅತ್ಯಾಧುನಿಕ ಉಪಕರಣಗಳನ್ನು ದೇಶೀಯ ತಂತ್ರವಿದ್ಯೆಯಿಂದಲೇ ನಿರ್ಮಿಸಲಾಗುತ್ತಿದೆ.  ಐ.ಟಿ.ಐ. ಈಗಾಗಲೇ ದೂರಸಂಪರ್ಕ ಉಪಕರಣಗಳನ್ನು ಹೊರದೇಶಗಳಿಗೆ ಹೆಚ್ಚುಹೆಚ್ಚಾಗಿ ರಫ್ತು ಮಾಡುತ್ತಿದೆ.

	ದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿರುವ ದೂರವಾಣಿ ಬೇಡಿಕೆಗಳನ್ನು ಪೂರೈಸುವ ಉದ್ದೇಶದಿಂದ ಬೇರೆ ಕೆಲವು ಕಡೆ ನೂತನ ಕಾರ್ಖಾನೆಗಳನ್ನು ಸ್ಥಾಪಿಸಿ ಸಂಪರ್ಕಸಾಧನಗಳ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ.  ಈ ದಿಸೆಯಲ್ಲಿ ಉತ್ತರಪ್ರದೇಶದ ನೈನಿಯಲ್ಲಿ ಎರಡು ಘಟಕಗಳನ್ನು ಮತ್ತು ರಾಯ್‍ಬರೇಲಿಯಲ್ಲಿ ಶ್ರೀನಗರ ಮತ್ತು ಕೇರಳದಲ್ಲಿನ ಪಾಲ್‍ಘಾಟಿನಲ್ಲಿ ಒಂದೊಂದು ಘಟಕಗಳನ್ನು ಸ್ಥಾಪಿಸಲಾಗಿದೆ.

	ಐ.ಟಿ.ಐ. ತಯಾರಿಸಿತ್ತಿರುವ ವಿವಿಧ ಉಪಕರಣಗಳ ನೆರವಿನಿಂದ ದೇಶದಲ್ಲಿ ದೂರಸಂಪರ್ಕ ಗಮನಾರ್ಹ ಪ್ರಗತಿ ಸಾಧಿಸಿದೆ.  ಸ್ವಾತಂತ್ರ್ಯೋದಯದ ಕಾಲದಲ್ಲಿ ಕೇವಲ 86,000 ದೂರವಾಣಿ ಉಪಕರಣಗಳಿದ್ದರೆ ಇಂದು ಅವುಗಳ ಸಂಖ್ಯೆ 17 ಲಕ್ಷವನ್ನೂ ಮೀರಿದೆ.  ಅಲ್ಲದೆ ದೂರವಾಣಿ ಸಂಪರ್ಕ ಪ್ರಮಾಣದಲ್ಲಿಯೂ ನೇರ ಸಂಪರ್ಕ ಸಾಕಷ್ಟು ಅಭಿವೃದ್ಧಿಯಾಗಿ ಈಗಾಗಲೇ ಅನೇಕ ದೊಡ್ಡ ನಗರಗಳ ನಡುವೆ ಈ ಸೌಲಭ್ಯ ಉಂಟು.

	11  ಅಂಕೆ ಅಂಶಗಳು: ಪ್ರಪಂಚದ ಕೆಲವು ಪ್ರಮುಖ ದೇಶಗಳನ್ನು ಕುರಿತ ಅಂಕೆ ಅಂಶಗಳನ್ನು ಇಲ್ಲಿ ಕೊಟ್ಟಿದೆ.  ಇವು ಜನವರಿ 1974ರ ಚಿತ್ರವನ್ನು ಕೊಡುತ್ತವೆ.
	--------------------------------------------------------------
	ಪ್ರದೇಶಗಳು			ಒಟ್ಟು ಉಪಕರಗಳ ಸಂಖ್ಯೆ		ಸರಾಸರಿ 100 ಜನಕ್ಕೆ
	--------------------------------------------------------------
	ಪ್ರಪಂಚ			....		336,294,000				8.6
 	ಅಮೆರಿಕ ಸಂಯುಕ್ತ 
	ಸಂಸ್ಥಾನ      		....		138,697,000 			64.47  
	ಜಪಾನ್			....		 38,697,901				35.40
	ಯುನೈಟೆಡ್ ಕಿಂಗ್‍ಡಮ್	....		 
	ಜರ್ಮನ್ ಫೆಡರಲ್ 
	ರಿಪಬ್ಲಿಕ್     		....		17,802,646                      28.73
	ಇಟಲಿ			....		12,611,653				22.86 
	ಕೆನಡ             	....	       11,668,292				52.31	
	ಫ್ರಾನ್ಸ್			....		11,337,000				21.66	
	ಸೋವಿಯತ್ 
	ಯೂನಿಯನ್		....		14,260,700			       5.68 	
	ಭಾರತ			....		1,590,000				0.27
	---------------------------------------------------------------------------

	ಪ್ರಪಂಚದ ಮುಖ್ಯನಗರಗಳ ಪೈಕಿ ಅತಿಹೆಚ್ಚಿನ ದೂರವಾಣಿ ಉಪಕರಣಗಳನ್ನು ಪಡೆದಿರುವ ಕೀರ್ತಿ ವಾಷಿಂಗ್‍ಟನ್ ನಗರಕ್ಕೆ ಸಲ್ಲುತ್ತದೆ.  ಅಲ್ಲಿನ ದೂರವಾಣಿ ಸಾಂದ್ರತೆಯನ್ನು ನಮ್ಮ ನಗರಗಳ ಪೈಕಿ ಅತಿಹೆಚ್ಚು ಸೌಲಭ್ಯ ಪಡೆದಿರುವ ಮುಂಬಯಿ ಮುಂತಾದ ನಗರಗಳ ಇದೇ ಸಾಂದ್ರತೆಗಳೊಡನೆ ಹೋಲಿಸಿ ನೋಡಬಹುದು. ( ಈ ಪಟ್ಟಿಯ ನಗರಗಳ ಜನಸಂಖ್ಯೆ 10 ಲಕ್ಷವನ್ನು ಮೀರಿದೆ).

ನಗರಗಳು			ದೂರವಾಣಿಗಳ ಸಂಖ್ಯೆ			ಸರಾಸರಿ 100 ಜನಕ್ಕೆ

	ವಾಷಿಂಗ್‍ಟನ್			970,901				130.3
	ದೆಹಲಿ				161,000				  3.8
	ಮುಂಬಯಿ			236,255				  3.7
	ಕಲ್ಕತ್ತ				171,487				  2.4
	ಮದ್ರಾಸ್				79,644				  2.3
	ಹೈದರಬಾದ್			 38,015				  2.0
	ಬೆಂಗಳೂರು			 34,146				  1.9
	ಪುಣೆ				 20,855				  1.7 
	ಅಹಮದಾಬಾದ್			 33,149				  1.8
	ಕಾನ್ಪುರ				 15,563				  1.1
	----------------------------------------------------------------
	(ಜೆ.ಆರ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ